ಸೋಮವಾರಪೇಟೆ ಜ.18 : ಹಬ್ಬಾಚರಣೆ-ಜಾತ್ರೋತ್ಸವಗಳು ಎಲ್ಲರೂ ಬೆರೆಯಲು ಪೂರಕವಾಗಿದ್ದು, ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕಿದರೆ ಮಾತ್ರ ಉತ್ಸವಗಳಿಗೆ ಸಾರ್ಥಕತೆ ಬರುತ್ತದೆ. ಈ ನಿಟ್ಟಿನಲ್ಲಿ ಶಾಂತಳ್ಳಿಯಲ್ಲಿ ಜರುಗುವ ವಾರ್ಷಿಕ ಜಾತ್ರಾ ಮಹೋತ್ಸವ ಮಾದರಿಯಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಕಳೆದ ತಾ. 13ರಿಂದ ಚಾಲನೆಗೊಂಡು ಇಂದು ಮುಕ್ತಾಯಗೊಂಡ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಗಳು ಪ್ರೀತಿ ವಿಶ್ವಾಸವನ್ನು ವೃದ್ಧಿಸಲು ಸಹಕಾರಿಯಾಗಬೇಕು. ಹಣ ಸಂಪಾದಿಸಿದರೂ ನೆಮ್ಮದಿಯನ್ನು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ದೇವಾಲಯಗಳು ನೆಮ್ಮದಿಯ ಕೇಂದ್ರಗಳಾಗಿ ರೂಪುಗೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.
ಅರಿಷಡ್ವರ್ಗಗಳನ್ನು ಮೀರಿ ಬದುಕು ನಡೆಸಿದರೆ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಕಿವಿಮಾತು ನುಡಿದ ಶ್ರೀ ಸದಾಶಿವ ಸ್ವಾಮೀಜಿಗಳು, ವೈಜ್ಞಾನಿಕತೆ ಎಷ್ಟೇ ಮುಂದುವರೆದೂ ಬದುಕಿನ ಸಾರ್ಥಕತೆ ಕಾಣಲು ದೇವಾಲಯಗಳ ಮಾರ್ಗದರ್ಶನ ಪಡೆಯಬೇಕು. ಧಾರ್ಮಿಕ ತಳಹದಿಯ ಮೇಲೆ ಸಮಾಜ ನಿರ್ಮಾಣಗೊಂಡರೆ ಮಾತ್ರ ಸಾಮರಸ್ಯದ ಜೀವನ ಕಂಡುಕೊಳ್ಳಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಮಾತನಾಡಿ, 2018ರ ಜಲಪ್ರಳಯ, ನಂತರದ ಕೊರೊನಾ ಸಂಕಷ್ಟಗಳ ನಡುವೆಯೂ ಸಮಾಜ ಚೇತರಿಕೆಗೊಂಡಿದ್ದು, ಪ್ರಕೃತಿ ಮತ್ತು ದೈವತ್ವದ ಅನುಗ್ರಹದಿಂದಾಗಿ ಪುನರುತ್ಥಾನಗೊಳ್ಳುತ್ತಿದೆ. ಜಾತ್ರಾ ಮಹೋತ್ಸವಗಳು ದೈವತ್ವದ ಮೇಲಿರುವ ಭಾವನಾತ್ಮಕ ಸಂಬAಧವನ್ನು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಿಸಿದರು.
ಭವಿಷ್ಯದ ಅಂಧಕಾರವನ್ನು ಹೋಗಲಾಡಿಸುವ ಶಕ್ತಿ ಕೇಂದ್ರವೇ ಭಗವಂತನ ಸಾನ್ನಿಧ್ಯವಾಗಿದೆ. ಭೌತಿಕ ಆಸೆ-ಆಮಿಷಗಳಿಗೆ ಒಳಗಾಗದಂತೆ ಮನಸ್ಸು ಜಾಗ್ರತೆಯಿಂದಿರಲು ಆಧ್ಯಾತ್ಮಿಕ ಸಾಧನೆ ಬೇಕು. ಇದಕ್ಕೆ ಭಗವಂತನೇ ಗುರು. ದೇವಾಲಯಗಳಲ್ಲಿ ಸಾಮೂಹಿಕವಾಗಿ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗಿಯಾಗುವುದು ಭಗವಂತನಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ. ಜಾತ್ರೋತ್ಸವಗಳಲ್ಲಿ ದೈವಿಕ ಶಕ್ತಿಯ ಮಹತ್ವವನ್ನು ಅರಿಯುವಂತಾಗಬೇಕು ಎಂದು ಜಿ. ರಾಜೇಂದ್ರ ಅವರು ತಿಳಿಸಿದರು.
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ದೇವಾಲಯಗಳ ನಿರ್ಮಾಣದಿಂದ ಗ್ರಾಮದಲ್ಲಿ ಸುಭೀಕ್ಷೆ ನೆಲೆಸಲು ಸಾಧ್ಯ ಎಂದರು. ಮಾಜೀ ಸಚಿವ ಬಿ.ಎ. ಜೀವಿಜಯ ಅವರು, ಆತ್ಮಶುದ್ಧಿಯಿಂದ ಮಾತ್ರ ಜೀವನದಲ್ಲಿ ಬೆಳಕು ಕಾಣಲು ಸಾಧ್ಯ. ಮಾನವನು ತನ್ನೊಳಗೆ ಮನುಷತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಹೈಕೋರ್ಟ್ ವಕೀಲ ಚಂದ್ರಮೌಳಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಉತ್ಕೃಷ್ಠ ಪರಂಪರೆಯ ಭಾಗವಾಗಿ ಜಾತ್ರೋತ್ಸವಗಳು ಉಳಿದುಕೊಂಡಿವೆ ಎಂದರು. ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ದೈವ ಬಲ ಜೊತೆಗಿರುತ್ತದೆ. ದೇವಾಲಯ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು. ಹೈಕೋರ್ಟ್ ವಕೀಲರಾದ ಎ.ಎಸ್. ಪೊನ್ನಣ್ಣ, ಜಿ.ಪಂ. ಮಾಜೀ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಅವರುಗಳು ಮಾತನಾಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್ ವಹಿಸಿದ್ದರು. ಶ್ರೀಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಸಜನ್ ಮಂದಣ್ಣ, ಗ್ರಾಮಾಧ್ಯಕ್ಷ ರವಿ ಉಪಸ್ಥಿತರಿದ್ದರು. ಪುರುಷೋತ್ತಮ್, ಮಧುಕುಮಾರ್, ಉತ್ತಯ್ಯ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಜಾತ್ರೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*