ಮಡಿಕೇರಿ ಜ.24 : ರಾಜಕೀಯ ಪಕ್ಷಗಳಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ನ್ಯಾಯ ದೊರೆಯದೆ ಇರುವುದರಿಂದ ತಾವು ಈ ಬಾರಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದಾಗಿ ಕಕ್ಕಬ್ಬೆ ಗ್ರಾ.ಪಂ ಮಾಜಿ ಸದಸ್ಯ ಹಾಗೂ ಅಲ್ಪಸಂಖ್ಯಾತರ ಹಿರಿಯ ಮುಖಂಡ ಎಂ.ಎ.ನಾಸಿರ್ ಮಕ್ಕಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಂದಿನ ಸಾಮಾಜಿಕ ಪರಿಸ್ಥಿತಿ ಹದಗೆಡಲು ರಾಜಕೀಯ ಪಕ್ಷಗಳ ಕೊಡುಗೆ ಬಹಳಷ್ಟಿದೆ. ಇಂದು ಯಾವುದೇ ರಾಜಕೀಯ ಪಕ್ಷಗಳು ಅದರ ತತ್ವ ಸಿದ್ಧಾಂತಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಕೇವಲ ಮತ ಬ್ಯಾಂಕ್ ಸೃಷ್ಟಿಯಷ್ಟೇ ಅವುಗಳ ಮೂಲ ಉದ್ದೇಶವಾಗಿರುವುದರಿಂದ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ. ಈ ಕಾರಣದಿಂದ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆನ್ನುವ ಗುರಿಯೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ನನ್ನ ಸ್ಪರ್ಧೆ ಖಚಿತವಾಗಿದ್ದು, ಕ್ಷೇತ್ರದಾದ್ಯಂತ ಜನರ ಒತ್ತಡ ಮತ್ತು ಬೆಂಬಲವಿದೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಜನರೇ ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಸ್ಪರ್ಧಿಸಲು ಮನಸ್ಸು ಮಾಡಿದ್ದು, ಅಗತ್ಯ ಸಿದ್ಧತೆಗಳನ್ನು ಆರಂಭಿಸಿದ್ದೇನೆ. ರಾಜಕೀಯ ಪಕ್ಷಗಳ ನಡೆಯಿಂದ ಬೇಸತ್ತಿರುವ ಕ್ಷೇತ್ರದ ಜನತೆಗೆ ನನ್ನ ಸ್ಪರ್ಧೆ ಉತ್ತಮ ಅವಕಾಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 30 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿದ್ದ ನಾನು ರಾಜಕೀಯ ಪಕ್ಷಗಳ ನಡೆಯಿಂದ ಬೇಸತ್ತು ಕಳೆದ 2ವರ್ಷಗಳಿಂದ ದೂರ ಉಳಿದಿದ್ದೇನೆ. ಗ್ರಾ.ಪಂ. ಸದಸ್ಯನಾಗಿ ಜನರ ಸೇವೆ ಮಾಡಿದ ಅನುಭವ ತಮಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಕೋಮುವಾದ-ಭ್ರಷ್ಟಾಚಾರ ಮುಕ್ತ ಕೊಡಗಿಗಾಗಿ ಜನರ ಧ್ವನಿಯಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಈಗಾಗಲೇ ಕ್ಷೇತ್ರದ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ನನ್ನ ಬೆಂಬಲಿಗರ ಸಭೆಯೊಂದನ್ನು ಕರೆಯಲಾಗುವುದು, ಮುಂದೆ ಹಂತ ಹಂತವಾಗಿ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು. ಜನರ ಮನೆ ಬಾಗಿಲಿಗೆ ತೆರಳಿ ವಿರಾಜಪೇಟೆ ಕ್ಷೇತ್ರದ ನೈಜ ಚಿತ್ರಣವನ್ನು ವಿವರಿಸುತ್ತೇನೆ ಮತ್ತು ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವ ಭರವಸೆ ನೀಡುತ್ತೇನೆ ಎಂದು ಎಂ.ಎ.ನಾಸಿರ್ ಮಕ್ಕಿ ತಿಳಿಸಿದ್ದಾರೆ.










