ಕುಶಾಲನಗರ ಫೆ.19 : ಕೂಡುಮಂಗಳೂರು ಗ್ರಾ.ಪಂ ನವಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಅನುದಾನದಡಿ 50 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಲಿದ್ದು, ಕಾಮಗಾರಿಯನ್ನು ಸ್ಥಳೀಯ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ದೀನ್ ಅವರು ಪರಿಶೀಲನೆ ನಡೆಸಿದರು.
ಕೂಡುಮಂಗಳೂರು ಗ್ರಾ.ಪಂ ನವಗ್ರಾಮವು ಗುಡ್ಡಗಳಿಂದ ಕೂಡಿದ್ದು, ಸೂಕ್ತವಾದ ರಸ್ತೆಯಿಲ್ಲದೇ ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿತ್ತು. ಈ ಹಿನ್ನೆಲೆ ಸ್ಥಳೀಯ ಗ್ರಾ.ಪಂ ಸದಸ್ಯರ ಆಸಕ್ತಿಯಿಂದ ಹಾಗೂ ಶಾಸಕರಾದ ಅಪ್ಪಚ್ಚುರಂಜನ್ ಅವರ ಸಹಕಾರದಿಂದ ನವಗ್ರಾಮದಲ್ಲಿ 50 ಲಕ್ಷ ರೂ.ಗಳ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ನವಗ್ರಾಮದ ನ್ಯಾಯ ಬೆಲೆ ಅಂಗಡಿ ಬಳಿಯಿಂದ ನಾಲ್ಕು ಮೀಟರ್ ಅಗಲದ ಸುಮಾರು 500 ಮೀಟರ್ ಉದ್ದದ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಲಿದೆ.
ಈ ಸಂದರ್ಭ ಮಾತನಾಡಿದ ಸದಸ್ಯರಾದ ಕೆ.ಬಿ.ಶಂಶುದ್ದೀನ್, ನವಗ್ರಾಮದಲ್ಲಿ ಈಗಾಗಲೇ ಪಂಚಾಯಿತಿ ವತಿಯಿಂದ ಸಾಕಷ್ಟು ಅನುದಾನವನ್ನು ವ್ಯಯಿಸಲಾಗಿದೆ. 15 ನೇ ಹಣಕಾಸು, ಪಂಚಾಯಿತಿ ನಿಧಿ, ತಾ.ಪಂ, ನರೇಗಾ, ತಾ.ಪಂ, ಶಾಸಕರ ಅನುದಾನ ಹಾಗೂ ಕಾವೇರಿ ನೀರಾವರಿ ನಿಗಮದ ಅನುದಾನ ಸೇರಿದಂತೆ ಅಂದಾಜು ಒಂದು ಕೋಟಿಯಷ್ಟು ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನವಗ್ರಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. ನವಗ್ರಾಮ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಸುಮಾರು 50 ಕ್ಕೂ ಕುಟುಂಬಗಳು ಗುಡ್ಡ ಕುಸಿಯುವ ಆತಂಕದಲ್ಲಿ ಜೀವಿಸುತ್ತಿದ್ದು, ಶಾಸಕರು ಇದರ ಬಗ್ಗೆ ಗಮನಹರಿಸಿ ತಡೆಗೋಡೆ ನಿರ್ಮಿಸಿಕೊಟ್ಟಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಮಳೆಗಾಲದಲ್ಲಿ ಆಗಾಗ ಗುಡ್ಡ ಕುಸಿತ ಹಾಗೂ ಮನೆಮೇಲೆ ಬಂಡೆ ಉರುಳುವ ಪ್ರಕರಣಗಳು ನಡೆಯುತ್ತಿರುತ್ತವೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಸದಸ್ಯ ಕೆ.ಬಿ.ಶಂಶುದ್ದೀನ್ ಒತ್ತಾಯಿಸಿದ್ದಾರೆ.
ಈ ಸಂದರ್ಭ ನವಗ್ರಾಮದ ನಿವಾಸಿಗಳಾದ ದೇವರಾಜ್, ಸ್ವಾಮಿ, ಪ್ರಕಾಶ್, ಸಫಿಯಾ, ಪ್ರಿಯ, ಪಾರ್ವತಮ್ಮ ಹಾಗೂ ಇನ್ನಿತರರು ಇದ್ದರು.