ಕುಶಾಲನಗರ ಮಾ.31 : ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲೆ ಮತ್ತು ಕುಶಾಲನಗರ ತಾಲೂಕು ಘಟಕ ಹಾಗೂ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ರಥೋತ್ಸವ ಪ್ರಯುಕ್ತ ನಡೆದ ಹಳ್ಳಿ ಹಬ್ಬ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಯ ನಾಗಾಲೋಟದಲ್ಲಿ ಅಳಿದು ಹೋಗುತ್ತಿರುವ ಜನಪದೀಯ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದಿನ ಕಾಲದಲ್ಲಿ ಜೀವನಕ್ಕೆ ಆಧಾರವಾಗಿದ್ದ ಜನಪದ ಕಥೆಗಳನ್ನು ಯುವ ಪೀಳಿಗೆಗೆ ಹೇಳಿಕೊಡಬೇಕಾಗಿದೆ. ಆ ಮೂಲಕ ಜಾನಪದ ಸಾಹಿತ್ಯದ ಅರಿವು ಮೂಡಿಸಲು ಸಾಧ್ಯ, ಮುಂದಿನ ಪೀಳಿಗೆಗೆ ಹಿಂದಿನ ಸಂಸ್ಕೃತಿ ಬಗ್ಗೆ ಪರಿಚಯಿಸುವ ಸಲುವಾಗಿ ಜಾನಪದ ಪರಿಷತ್ ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅನಂತಶಯನ ಹೇಳಿದರು.
ಜಾನಪದ ಸಂಭ್ರಮಕ್ಕೆ ಚಾಲನೆ ನೀಡಿದ ಜಾನಪದ ಪರಿಷತ್ ಜಿಲ್ಲಾ ಘಟಕದ ಪ್ರಮುಖರಾದ ಜಯಶ್ರೀ ಅನಂತಶಯನ ಮಾತನಾಡಿ, ಮಕ್ಕಳಿಗೆ ಜಾನಪದ ಗೀತೆ ಗಾಯನದ ಬಗ್ಗೆ ತಿಳಿ ಹೇಳಬೇಕಾಗಿದೆ ಎಂದರು. ಜಾನಪದ ಗೀತೆ ಹಾಗೂ ಶ್ರೀರಾಮ ದೇವರ ಹಾಡು ಹೇಳುವ ಮೂಲಕ ಅವರು ಜಾನಪದ ಸಂಭ್ರಮಕ್ಕೆ ಚಾಲನೆ ನೀಡಿದರು.
ಶ್ರೀ ರಾಮಲಿಂಗೇಶ್ವರ ದೇವಾಲಯ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಎನ್.ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕಣಿವೆ ಹಿರಿಯ ಸಾಹಿತಿ ಭಾರದ್ವಾಜ ಆನಂದ್ ತೀರ್ಥ ಅವರು ಮಾತನಾಡಿ, ಮುಂದಿನ ವರ್ಷದಿಂದ ಜಾತ್ರೆಯ ಸಂದರ್ಭ ಜಾನಪದ ಪರಿಷತ್ ಮೂಲಕ ಜಾನಪದ ಸಮ್ಮೇಳನ ಏರ್ಪಡಿಸುವ ಬಗ್ಗೆ ಚಿಂತನೆ ಹರಿಸುವಂತೆ ಕೋರಿದರು. ಕಣಿವೆ ಗ್ರಾಮಸ್ಥರ ಎಲ್ಲರ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.
ಪರಿಷತ್ತಿನ ತಾಲೂಕು ಗೌರವಾಧ್ಯಕ್ಷರಾದ ಫ್ಯಾನ್ಸಿ ಮುತ್ತಣ್ಣ, ಕಾರ್ಯಕ್ರಮ ಸಂಯೋಜಕರಾದ ವನಿತಾ ಚಂದ್ರಮೋಹನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಾನಪದ ಗೀತೆ, ಸಮೂಹ ಗೀತೆಗಳ ಸ್ಪರ್ಧೆಗಳು ನಡೆದವು. ಕುಶಾಲನಗರ ಗೌಡ ಸಮಾಜ, ಕೊಡವ ಸಮಾಜ, ಮಹಿಳಾ ಭಜನಾ ಮಂಡಳಿ ತಂಡದ ಸದಸ್ಯರು, ಗ್ರಾಮದ ಯುವಕ ಯುವತಿಯರು ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ದಲ್ಲಿ ಪ್ರಥಮ ಸ್ಥಾನ ಗಳಿಸಿ ಸಾಧನೆಗೈದ ಕುಶಾಲನಗರದ ವಿದ್ಯಾರ್ಥಿನಿ ಪ್ರಗತಿ ಬಡಿಗೇರ್ ಹಾಡುವ ಮೂಲಕ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮದಲ್ಲಿ ಜನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಬಿ ಜಿ ಅನಂತಶಯನ, ದೇವಾಲಯ ಅಧ್ಯಕ್ಷರಾದ ಕೆ.ಎನ್ ಸುರೇಶ್ ಸಾಹಿತಿಗಳಾದ ಭಾರದ್ವಾಜ್ ಅನಂದ ತೀರ್ಥ ಮತ್ತು ವಿದ್ಯಾರ್ಥಿನಿ ಪ್ರಗತಿ ಬಡಿಗೇರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಳ್ಳಿ ಹಬ್ಬ ಅಂಗವಾಗಿ ನಡೆದ ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳನಾಡಿದರು. ಜಾನಪದ ಪರಿಷತ್ ಜಿಲ್ಲಾ ಘಟಕದ ಮತ್ತು ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಸದಸ್ಯರು ಹಾಗೂ ದೇವಾಲಯ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಕಿ ಮಾಲಾ ಮೂರ್ತಿ ಅವರು ಕಾರ್ಯಕ್ರಮ ನಿರೂಪಣೆ, ಬಿ.ಎಸ್ ಪರಮೇಶ್ ಪ್ರಾರ್ಥನೆ, ಕೊಡಗನ ಹರ್ಷ ವಂದಿಸಿದರು.










