ಮಡಿಕೇರಿ ಏ.30 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಚುನಾವಣಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಘಟಕ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರಮೋದ್ ಗಣಪತಿ ಸೋಲಿನ ಭೀತಿಯಲ್ಲಿ ಹತಾಶೆಗೊಂಡಿರುವ ಪ್ರತಿಸ್ಪರ್ಧಿಗಳು ಟಿಪ್ಪುವಿನ ಪ್ರತಿಮೆ ಸ್ಥಾಪನೆ ಕುರಿತು ಡಾ.ಮಂತರ್ ಗೌಡರ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಯ ಆಧಾರದಲ್ಲಿ ಮತಯಾಚನೆ ಮಾಡಲು ಸಾಧ್ಯವಾಗದವರು ಭಾವನೆಗಳನ್ನು ಕೆಣಕಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಸಮೂಹ ಈ ಬಾರಿ ಅಭಿವೃದ್ಧಿಪರ ಚಿಂತನೆಯ ಉತ್ಸಾಹಿ ಯುವಕ ಡಾ.ಮಂತರ್ ಗೌಡ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಪ್ರತಿಸ್ಪರ್ಧಿಗಳು ಮತದಾರರ ಹಾದಿ ತಪ್ಪಿಸುವುದಕ್ಕಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಏನೇ ಅಪಪ್ರಚಾರ ಮಾಡಿದರೂ ಬದಲಾವಣೆಯನ್ನು ಬಯಸಿರುವ ಕ್ಷೇತ್ರದ ಮತದಾರರು ಅತ್ಯಧಿಕ ಮತಗಳಿಂದ ಮಂತರ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಪ್ರಮೋದ್ ಗಣಪತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.











