ಮಡಿಕೇರಿ ಆ.12 : ಗ್ರಾಮೀಣ ಸೊಗಡಿನ ಜಾನಪದ ಕಲೆಯ ‘ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ’ ಮಡಿಕೇರಿ ಸಮೀಪ ಕಗ್ಗೋಡ್ಲುವಿನ ಗದ್ದೆ ಬಯಲಿನಲ್ಲಿ, ಉತ್ಸಾಹಿ ಕ್ರೀಡಾಳುಗಳು ಹಾಗೂ ಕ್ರೀಡಾ ಪ್ರೇಮಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
ಕೊಡಗು ಜಿಲ್ಲಾ ಪಂಚಾಯ್ತಿ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲ್ಲೂಕು ಯುವ ಒಕ್ಕೂಟ, ಕಗ್ಗೋಡ್ಲು ಕಾವೇರಿ ಯುವಕ ಸಂಘ ಹಾಗೂ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನ ದಿವಂಗತ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಯ ಹಲವು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು.
ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ, ಸಾರ್ವಜನಿಕ ಪುರುಷರ ವಾಲಿಬಾಲ್, ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್, ಪ್ರೌಢ ಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ, ಪ್ರೌಢಶಾಲಾ ಬಾಲಕ-ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು, ಅದರಲ್ಲೂ ಹಗ್ಗಜಗ್ಗಾಟ ಸ್ಪರ್ಧೆ ಅತ್ಯಂತ ಕುತೂಹಲಕಾರಿಯಾಗಿ ನಡೆದು ಗಮನ ಸೆಳೆಯಿತು.
::: ಕೆಸರಿನಲ್ಲಿ ಮಿಂದೆದ್ದ ಪುಟಾಣಿಗಳು :::
ವಿಶಾಲವಾದ ಗದ್ದೆ ಬಯಲಿನಲ್ಲಿ ಆಯೋಜಿತ ಸ್ಪರ್ಧೆಗಳಲ್ಲಿ ಪುಟಾಣಿ ಮಕ್ಕಳು ಪಾಲ್ಗೊಂಡು, ಗದ್ದೆಯ ಕೆಸರಿನಲ್ಲಿ ಮಿಂದೆದ್ದು ಸಂತಸಪಟ್ಟರು.
::: ದಂಪತಿಗಳ ಓಟ :::
ಈ ಬಾರಿ ಸಾಂಪ್ರದಾಯಿಕ ಕ್ರೀಡೆಗಳೊಂದಿಗೆ ಆಯೋಜಿತವಾಗಿದ್ದ ಕೈ ಕೈ ಹಿಡಿದು ಕೊಂಡು ದಂಪತಿಗಳ ಓಟ ಕುತೂಹಲಕಾರಿಯಾಗಿ ನಡೆಯಿತು. ಗೆದ್ದೇ ತೀರಬೇಕೆನ್ನುವ ದಂಪತಿಗಳ ಉತ್ಸಾಹ, ಪತಿಗೆ ಸರಿಸಾಟಿಯಾಗಿ ಓಡುವ ಪತ್ನಿಯರ ಪರದಾಟ. ಕೆಸರಿನಲ್ಲಿ ಓಡಲಾಗದೆ ಬಿದ್ದ ಮಹಿಳೆಯರು, ನೋಡುಗರ ಉತ್ಸಾಹದ ಕೇಕೆಗಳು ಕೆಸರು ಗದ್ದೆ ಕ್ರೀಡಾ ಕೂಟಕ್ಕೆ ವಿಶೇಷ ಕಳೆಯನ್ನು ತಂದಿತು.
ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧ ಸ್ಪರ್ಧಾ ಚಟುವಟಿಕೆಗಳು ಸಾಂಗವಾಗಿ ನಡೆದವು. ಮಧ್ಯಾಹ್ನದವರೆಗೆ ಅಷ್ಟೇನು ಕಾಣದ ಮಳೆ, ಮಧ್ಯಾಹ್ನದ ಬಳಿಕ ಹದವಾಗಿ ಕೆಲ ಕಾಲ ಸುರಿಯುವ ಮೂಲಕ ಕೆಸರು ಗದ್ದೆ ಕ್ರೀಡಾ ಕೂಟಕ್ಕೆ ವಿಶೇಷ ಮೆರುಗನ್ನು ನೀಡಿತು.
::: ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ :::
ಕ್ರೀಡಾ ಕ್ಷೇತ್ರಕ್ಕೆ ಗ್ರಾಮೀಣ ಪ್ರತಿಭೆಗಳ ಕೊಡುಗೆ ಅಪಾರವಾಗಿದ್ದು, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹೇಳಿದರು.
ಕೆಸರು ಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಹಲವು ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮತ್ತಷ್ಟು ಪ್ರೋತ್ಸಾಹ ದೊರೆತ್ತಲ್ಲಿ ಹೆಚ್ಚಿನ ಕ್ರೀಡಾಪಟುಗಳು ಬೆಳಕಿಗೆ ಬರಬಹುದು ಎಂದರು.
ಕೆಸರು ಗದ್ದೆ ಕ್ರೀಡಾಕೂಟದ ಮೂಲಕ ಗ್ರಾಮೀಣ ಸೊಗಡಿನ ಕ್ರೀಡಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯವೆಂದರು.
ಪ್ರಾಸ್ತವಿಕವಾಗಿ ಮಾತನಾಡಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಗ್ರಾಮೀಣ ಕ್ರೀಡಾಕೂಟಕ್ಕೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದರು.
ಮಡಿಕೇರಿ ನಗರದಲ್ಲಿ ಯುವ ಒಕ್ಕೂಟದ ಚಟುವಟಿಕೆಗಾಗಿ ನಿರ್ಮಾಣಗೊಂಡಿರುವ ಯುವ ಭವನದಲ್ಲಿ ಮಹಿಳಾ ಕಾಲೇಜನ್ನು ನಡೆಸಲಾಗುತ್ತಿದೆ. ಕಳೆದ 10 ವರ್ಷಗಳಿಂದ ಯುವ ಭವನವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸಿಲ್ಲ. ವಿಧಾನ ಪರಿಷತ್ ಸದಸ್ಯರು ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪಿಸಿ ಯುವ ಭವನವನ್ನು ನಮಗೆ ನೀಡಬೇಕೆಂದು ಮನವಿ ಮಾಡಿದರು.
ಹಾಕತ್ತೂರು ಗ್ರಾ.ಪಂ ಸದಸ್ಯ ಪೊನ್ನಚ್ಚನ ಲೋಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ಅಧಿಕಾರಿ ವಿಸ್ಮಯಿ, ನೆಹರು ಯುವ ಕೇಂದ್ರದ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೀತಾಂಜಲಿ, ಯುವ ಒಕ್ಕೂಟದ ಮಾಜಿ ಅಧ್ಯಕ್ಷ ವೆಂಕಟೇಶ್, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟದ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
::: ಪರಿಸರ ಕಾಳಜಿ :::
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಇದೇ ಸಂದರ್ಭ “ನಮ್ಮ ದೇಶ ನಮ್ಮ ಮಣ್ಣು” ಘೋಷ ವಾಕ್ಯದೊಂದಿಗೆ ಯುವ ಒಕ್ಕೂಟದ ಪದಾಧಿಕಾರಿಗಳು ಹಾಗೂ ಅತಿಥಿಗಳು ಗಿಡ ನೆಟ್ಟು ಪರಿಸರ ಪ್ರಜ್ಞೆ ಮೆರೆದರು.
Breaking News
- *ಕೊಡಗು ಔಷಧಿ ವ್ಯಾಪಾರಿಗಳ ಸಂಘದಿಂದ ರಕ್ತಸಂಗ್ರಹಣಾ ಶಿಬಿರ : ಔಷಧೀಯ ಅಂಶ ಹೊಂದಿರವ ರಕ್ತದ ದಾನಕ್ಕೆ ಸವ೯ರೂ ಮುಂದಾಗಿ : ಗುರುನಾಥ್ ಕರೆ*
- *ಬೇಟೋಳಿಯಲ್ಲಿ ಮಕ್ಕಳ ಗ್ರಾಮಸಭೆ*
- *ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ*
- *ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೂರ್ನಾಡು-ಸಿದ್ದಾಪುರ ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಕಟ್ಟೆಮಾಡು ಪ್ರಕರಣ : ಉಸ್ತುವಾರಿ ಸಚಿವರು, ಶಾಸಕರುಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಲಿ*
- *ವಸತಿ ಸಚಿವರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತ ಮುಖಂಡರು : ಮೂಲ ಸೌಕರ್ಯಗಳ ಕುರಿತು ಚರ್ಚೆ*
- *ಎಂ.ಎಂ.ಸುಪ್ರಿತಾಗೆ ಚಿನ್ನದ ಪದಕ*
- *ಜ.25 ರಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ*
- *ಸುಂಟಿಕೊಪ್ಪ : ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ : ಎ.ಲೋಕೇಶ್ ಕುಮಾರ್*
- *ಮಡಿಕೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ*