ಮಡಿಕೇರಿ ಅ.17 : ನಗರದ ಗಾಂಧಿ ಮೈದಾನದ ಸಮೀಪ ಸುಮಾರು 1.60 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ‘ಗಾಂಧೀಜಿ ಸ್ಮಾರಕ ಉದ್ಯಾನವನ’ಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಶಂಕುಸ್ಥಾಪನೆ ನೆರವೇರಿಸಿದರು.
ಸರ್ವೋದಯ ಸಮಿತಿಯ ಸಹಯೋಗದಲ್ಲಿ ಜಿಲ್ಲಾಡಳಿತ, ಜಿ.ಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸ್ಮಾರಕ ಉದ್ಯಾನವನಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಚಿವರು, ಇಡೀ ವಿಶ್ವಕ್ಕೆ ಮಾದರಿಯಾದ ಮಹಾತ್ಮಾ ಗಾಂಧೀಜಿಯವರ ಸ್ಮಾರಕ ಉದ್ಯಾನವನವನ್ನು ಒಳಗೊಂಡ ಭವನ ಕಾಲ ಮಿತಿಯಲ್ಲಿ ಪೂರ್ಣಗೊಳ್ಳಬೇಕು. ಆ ಮೂಲಕ ಗಾಂಧೀಜಿಯವರ ತತ್ತ್ವ ಸಿದ್ಧಾಂತಗಳು ಜನರಿಗೆ ನಿರಂತರವಾಗಿ ಪ್ರೇರಣೆಯನ್ನು ನಿಡುವಂತಾಗಬೇಕು. ಉದ್ದೇಶಿತ ಕಾರ್ಯಯೋಜನೆ ಜಿಲ್ಲಾಧಿಕಾರಿಗಳ ಜವಾಬ್ದಾರಿಯಲ್ಲಿ ನಡೆಯಲಿದೆ. ಜನಪ್ರತಿನಿಧಿಗಳೆಲ್ಲ ಒಟ್ಟಾಗಿ ಒಮ್ಮತದಿಂದ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಮಾತನಾಡಿ, ದೆಹಲಿಯ ‘ರಾಜ್ ಘಾಟ್’ ಮಾದರಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಸ್ಮಾರಕ ಉದ್ಯಾನವನ ನಿರ್ಮಾಣವಾಗಬೇಕಾಗಿದೆ. ಈ ಹಿಂದೆ ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಸುಮಾರು 1.60 ಕೋಟಿ ವೆಚ್ಚದ ಕಾರ್ಯಯೋಜನೆಯನ್ನು ರೂಪಿಸಲಾಗಿತ್ತು. ಇಂದು ಶಂಕುಸ್ಥಾಪನೆ ನೆರವೇರಿದ್ದು, ಕಾಮಗಾರಿ ಆರಂಭದ ಬಳಿಕ ಯಾವುದೇ ಕಾರಣಕ್ಕು ಅದು ಅರ್ಧಕ್ಕೆ ನಿಲ್ಲುವಂತಾಗಬಾರದು ಎಂದರು.
ಅಗತ್ಯ ಅನುದಾನಕ್ಕಾಗಿ ತಕ್ಷಣವೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ತಿಂಗಳ ಒಳಗಾಗಿ ಅಗತ್ಯ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಒದಗಿಸಬೇಕು. ಕೊಡವ ಹೆರಿಟೇಜ್ ಸೇರಿದಂತೆ ಜಿಲ್ಲೆಯಲ್ಲಿ ಹಲ ಕಾಮಗಾರಿಗಳು ಅರ್ಧಕ್ಕೆ ನಿಂತ ಉದಾಹರಣೆ ನೀಡಿದ ಅವರು, ಗಾಂಧಿ ಸ್ಮಾರಕ ನಿರ್ಮಾಣದಲ್ಲಿ ಇದು ನಡೆಯಕೂಡದೆಂದು ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಗಾಂಧೀಜಿ ಸ್ಮಾರಕ ನಿರ್ಮಾಣಕ್ಕೆ ತನ್ನ ಶಾಸಕರ ನಿಧಿಯಿಂದ ಅಗತ್ಯ ನೆರವನ್ನು ಒದಗಿಸುತ್ತೇನೆ. ಇದೇ ರೀತಿ ಶಾಸಕರು, ಸಂಸದರು, ಎಂಎಲ್‍ಸಿ, ನಗರಸಭೆ ತಮ್ಮ ನೆರವನ್ನು ಒದಗಿಸಿದಲ್ಲಿ ಸುಮಾರು 50 ಲಕ್ಷ ರೂ. ಸಂಗ್ರಹವಾಗುತ್ತದೆ. ಮುಖ್ಯಮಂತ್ರ್ರಿಗಳನ್ನು ಭೇಟಿಯಾಗಿ ಇನ್ನುಳಿದ ಮೊತ್ತಕ್ಕೆ ಅಗತ್ಯ ಸಹಕಾರವನ್ನು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕೆ ಅತ್ಯಪೂರ್ವವಾದ ಕೊಡುಗೆ ನೀಡಿದ ಮಹಾತ್ಮಾ ಗಾಂಧೀಜಿ ಅವರ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ನೆರವನ್ನು ತಾನು ಒದಗಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಯೋಜನೆ ಪೂರ್ಣವಾಗಬೇಕೆಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ವೋದಯ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, 1934 ರ ಫೆ.21 ರಿಂದ ಮೂರು ದಿನಗಳ ಕಾಲ ಕೊಡಗಿಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧೀಜಿಯವರು, ಈಗ ಇರುವ ಗಾಂಧಿ ಮಂಟಪದ ದಿಬ್ಬದಲ್ಲಿ ಭಾಷಣ ಮಾಡಿದ್ದರು. ಹಿಂದೆ ಇದನ್ನು ‘ಗಾಂಧಿ ಗುಡ್ಡ’ವೆಂದು ಕರೆಯುತ್ತಿದ್ದರು ಎಂದರು.
ಮಹಾತ್ಮರ ನಿಧನದ ಬಳಿಕ ಅವರ ಚಿತಾಭಸ್ಮವನ್ನು ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ದೇವಯ್ಯ ಅವರು ಕೊಡಗಿಗೆ ತೆಗೆದುಕೊಂಡು ಬಂದಿದ್ದು, ಅದರಲ್ಲಿ ಒಂದು ಭಾಗವನ್ನು ಕಾವೇರಿಯಲ್ಲಿ ವಿಸರ್ಜಿಸಿ, ಉಳಿದ ಚಿತಾ ಭಸ್ಮವನ್ನು ಕಳೆದ 65 ವರ್ಷಗಳಿಂದ ಜಿಲ್ಲಾ ಖಜಾನೆಯಲ್ಲಿರಿಸಿ ಸಂರಕ್ಷಿಸಿಕೊಂಡು ಬರಲಾಗುತ್ತಿದೆ.
ಇಷ್ಟು ವರ್ಷಗಳ ಕಾಲ ಸರ್ವೋಯದಯ ಸಮಿತಿ ಮಹಾತ್ಮರ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಬಲದೇವಕೃಷ್ಣ ಅವರ ಅವಧಿಯಲ್ಲಿ ಗಾಂಧೀ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಪ್ರಯತ್ನಿಸಲಾಗಿತ್ತು. ನಂತರದ ಅವಧಿಯಲ್ಲಿ ಅಂದಿನ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು 50 ಲಕ್ಷ ರೂ.ಗಳನ್ನು ಇದಕ್ಕಾಗಿ ಒಗಿಸಿದ್ದನ್ನು ಸ್ಮರಿಸಿದರಲ್ಲದೆ, ಈ ಮೊತ್ತ ಭವನ ನಿರ್ಮಾಣದ ಸಲುವಾಗಿ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ.
ಭವನ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕಂದಾಯ ಇಲಾಖೆ ವಶದಲ್ಲಿದ್ದ ಗಾಂಧಿ ಮಂಟಪ ಜಾಗವನ್ನು ಹಿಂದಿನ ಜಿಲ್ಲಾಧಿಕಾರಿ ಸತೀಶ್ ಅವರ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಶಕ್ಕೆ ನೀಡಲಾಗಿದೆ. ಉದ್ದೇಶಿತ ಸ್ಮಾರಕ ಆದಷ್ಟು ಶೀಘ್ರ ಕಾರ್ಯಗತಗೊಳ್ಳಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜ್, ಎಸ್‍ಪಿ ಕೆ. ರಾಮರಾಜನ್, ಸಿಇಒ ವರ್ಣಿತ್ ನೇಗಿ, ಸರ್ವೋದಯ ಸಮಿತಿ ಅಧ್ಯಕ್ಷ ಕುಶಾಲಪ್ಪ ಅಂಬೆಕಲ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ನವೀನ್ ಅಂಬೆಕಲ್ಲು, ಸಿದ್ದರಾಜು, ಕಾನೆಹಿತ್ಲು ಮೊಣ್ಣಪ್ಪ, ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಬಿ.ವೈ.ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು. ಸರ್ವೋದಯ ಸಮಿತಿಯ ಎಸ್.ಐ.ಮುನೀರ್ ಅಹಮ್ಮದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ವಂದಿಸಿದರು.










