ಕುಶಾಲನಗರ, ಅ.21 : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ “ಕರ್ನಾಟಕ ಸುವರ್ಣ ಸಂಭ್ರಮ : 50, “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಜಿಲ್ಲಾ ಕ.ಸಾ.ಪ. ಸಲಹೆಗಾರ ಟಿ.ಪಿ.ರಮೇಶ್ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.) ಹಾಗೂ ಕುಶಾಲನಗರ ತಾಲ್ಲೂಕು ಕ.ಸಾ.ಪ. ವತಿಯಿಂದ ಕ.ಸಾ.ಪ.ಹೆಬ್ಬಾಲೆ ಘಟಕದ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉತ್ತರ ಕೊಡಗಿನ ಗಡಿಭಾಗದ ಹೆಬ್ಬಾಲೆ ಗ್ರಾಮದಲ್ಲಿ ನವೆಂಬರ್ : 2023 ರಲ್ಲಿ ನಡೆಸಲುದ್ದೇಶಿಸಿರುವ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಸಂಘಟನೆ ಕುರಿತು ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಆಚರಣೆ ಕುರಿತು ರೂಪುರೇಷೆ ಕುರಿತು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಜನಜನಿತವಾಗಿದ್ದು, ಆಧುನಿಕತೆಯ ಪರಾಕಾಷ್ಠೆಯಿಂದ ಸೊರಗುತ್ತಿರುವ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಮೂಲಕ ಅವುಗಳನ್ನು ಪುನರುತ್ಥಾನಗೊಳಿಸುವ ದಿಸೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯನ್ನು ಈ ಬಾರಿಯ ನವೆಂಬರ್ 1 ರಿಂದ ಮುಂದಿನ ವರ್ಷದ ನವೆಂಬರ್ 1 ರವರೆಗೆ ಇಡೀ ವರ್ಷ ಈ ಸಂಭ್ರಮವನ್ನು ಕರ್ನಾಟಕ ಸಂಭ್ರಮ-50 ಅನ್ನೋ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ.
ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಸರ್ಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಲೆ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ರಮೇಶ್ ಹೇಳಿದರು.
ಈ ಸುವರ್ಣ ಸಂಭ್ರಮದ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಿ ಸ್ಥಳೀಯರಿಗೆ ಜವಾಬ್ದಾರಿ ಹಂಚಿಕೆ ಜೊತೆಗೆ ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸಬೇಕು. ಸಾಂಸ್ಕೃತಿಕ ಮೆರವಣಿಗೆ, ಸ್ಥಳೀಯ ಸಾಂಸ್ಕೃತಿಕ ವೈಭವ, ಜನಪದ ಕ್ರೀಡೆಗಳು, ಜನಪದ ವಸ್ತು ಪ್ರದರ್ಶನ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ರಮದ ನೈಜ ಸಂಭ್ರಮ ಹೆಚ್ಚಿಸಲು ಸಾರ್ವಜನಿಕರು, ಯುವಕರು, ಮಹಿಳೆಯರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಳ್ಳುವಂತೆ ಅಗತ್ಯದ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಸಲಹೆ ನೀಡಿದರು.
ಹೆಬ್ಬಾಲೆ ಗ್ರಾಮದಲ್ಲಿ ನವೆಂಬರ್ ತಿಂಗಳಿನಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರ ಸಹಕಾರದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಸುವರ್ಣ ಸಂಭ್ರಮ ಆಚರಣೆಗೆ ಹೆಬ್ಬಾಲೆ ಮತ್ತು ಸುತ್ತಮುತ್ತಲಿನ ತೊರೆನೂರು, ಶಿರಂಗಾಲ, ಮಣಜೂರು, ಕಣಿವೆ, ಅಳುವಾರ, ಹಳೇಗೋಟೆ, ಸಿದ್ಧಲಿಂಗಪುರ ಗ್ರಾಮಗಳ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಕನ್ನಡ ಹಬ್ಬವನ್ನು ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ ಅಧ್ಯಕ್ಷೆ ಎಚ್.ಪಿ. ಅರುಣಕುಮಾರಿ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ನಾಡು- ನುಡಿ, ಕಲೆ ಹಾಗೂ ಜನಪದ ಸಂಸ್ಕೃತಿ ಬೆಳವಣಿಗೆಗೆ ಎಲ್ಲರೂ ಜತೆಗೂಡಿ ಗ್ರಾಮೀಣ ಜನಪದ ಸೊಗಡನ್ನು ಪ್ರತಿಬಿಂಬಿಸೋಣ ಎಂದರು.
ಕಸಾಪ ಹೆಬ್ಬಾಲೆ ಘಟಕದ ಅಧ್ಯಕ್ಷ ಮಣಜೂರು ಮೂರ್ತಿ, ಹೆಬ್ಬಾಲೆ ಸುತ್ತಮುತ್ತಲಿನ ಎಲ್ಲಾ ಜನತೆ ಸೇರಿ ಸುವರ್ಣ ಸಂಭ್ರಮ ಉತ್ಸವವನ್ನು ಯಶಸ್ವಿಗೊಳಿಸೋಣ ಎಂದರು.
ಹೆಬ್ಬಾಲೆ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಲ್.ರಮೇಶ್ ಮಾತನಾಡಿ, ಇಂತಹ ಕನ್ನಡಪರ ಚಟುವಟಿಕೆಗಳಿಗೆ ಎಲ್ಲರೂ ಸೇರಿ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಸುವರ್ಣ ಸಂಭ್ರಮ: 50 ವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಅಭಿಪ್ರಾಯ ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ, ಉದ್ಯಮಿ ಎಚ್.ಕೆ.ನಟೇಶ್ ಗೌಡ ಸುವರ್ಣ ಸಂಭ್ರಮ ಆಚರಣೆ ಕುರಿತು ಸಲಹೆ ನೀಡಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ನಾಗೇಂದ್ರ, ಕ.ಸಾ.ಪ.ತಾಲ್ಲೂಕು ಸಮಿತಿಯ ಗೌರವ ಕಾರ್ಯದರ್ಶಿ ಟಿ.ವಿ.ಶೈಲಾ, ಗೌರವ ಕೋಶಾಧಿಕಾರಿ ಕೆ.ವಿ.ಉಮೇಶ್, ಕ.ಸಾ.ಪ.ಸಮಿತಿ ಸದಸ್ಯರಾದ ಎಂ.ಎನ್.ಕಾಳಪ್ಪ,ಬಿ.ಬಿ.ಸಾವಿತ್ರಿ, ಟಿ.ಬಿ.ಮಂಜುನಾಥ್, ಬಿ.ಬಿ.ಹೇಮಲತಾ, ಸೋಮಶೇಖರ್, ಎಚ್.ಬಿ.ದಿನೇಶಚಾರಿ, ಕವಿತ ಪುಟ್ಟೇಗೌಡ, ಕೂಡಿಗೆ ಶ್ರೀನಿವಾಸ್, ತೊರೆನೂರು ಗ್ರಾಮದ ಟಿ.ಡಿ.ಸೋಮಣ್ಣ, ಟಿ.ಡಿ.ನರೇಂದ್ರ, ಟಿ.ಎಸ್.ಚಂದ್ರಶೇಖರ್, ಗ್ರಾಮ ಪಂಚಾಯತಿ ಪಿಡಿಓ ಬಿ. ಡಿ. ವೀಣಾ, ಶಿರಂಗಾಲದ ಎಸ್.ಎಸ್.ಚಂದ್ರಶೇಖರ್, ಎಸ್.ವಿ.ಧನೇಂದ್ರಕುಮಾರ್ ಇತರರು ಇದ್ದರು.