ಮಡಿಕೇರಿ ಅ.28 : ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕುಶಾಲನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ಗಣ್ಯರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿ ಅವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದು 3ನೇ ಶತಮಾದಲ್ಲಿ ಬರೆದ ರಾಮಾಯಣವನ್ನು ನಾವು ಆಗಿನಿಂದ ಈಗಿನ ವರೆಗೂ ಅಳವಡಿಸಿಕೊಡು ಬಂದಿದ್ದೇವೆ. ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿ 24000 ಶ್ಲೋಕಗಳು, 7 ಕ್ಯಾಂಟೋಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಸುಮಾರು 10 ವರ್ಷಗಳಿಂದ ಕುಶಾಲನಗರ ವಾಲ್ಮೀಕಿ ಸಮುದಾಯ ಭವನ ಪಾಳುಬಿದ್ದಿದ್ದು ಇದರ ದುರಸ್ತಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಶಾಲನಗರ ತಹಶೀಲ್ದಾರ್ ಕಿರಣ್ ಗೋರಯ್ಯ, ಸರ್ಕಾರದ ಆದೇಶದಂತೆ ಎಲ್ಲಾ ಧರ್ಮದ, ಜಾತಿಯ ಹಾಗೂ ಸಮಾಜದ ಗುರುಗಳ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ವಾಲ್ಮೀಕಿ ಸಮಾಜವು ಹಿಂದಿನಿಂದಲೂ ದೊಡ್ಡ ಸಮಾಜ, ವಾಲ್ಮೀಕಿ ಅವರು ಮಹರ್ಷಿ ಆಗುವುದಕ್ಕಿಂತ ಮೊದಲು ಯಾವ ರೀತಿ ಬೇಟೆಗಾರರಾಗಿ ಇದ್ದರು ನಂತರ ಯಾವ ರೀತಿ ಮಹರ್ಷಿ ಆಗಿ ಬದಲಾದರು ಎಂಬುದನ್ನು ವಿವರಿಸಿದ ಅವರು, ನಮ್ಮ ಜೀವನವನ್ನು ಉತ್ತಮರನ್ನಾಗಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.
ಪ್ರಮುಖರಾದ ಶಿವಾನಂದ ಮಾತನಾಡಿ, ಈ ಸಮಾರಂಭ ನಡೆಸುವ ಸಲುವಾಗಿ ಪೂರ್ವ ಭಾವಿ-ಸಭೆಯನ್ನು ಸೊಮವಾರಪೇಟೆ ತಹಶೀಲ್ದಾರ್ ಸಮ್ಮುಖದಲ್ಲಿ ನಡೆಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಶಾಸಕರಿಗೆ ಜಿಲ್ಲಾ ಮಟ್ಟದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ಸ್ಥಾಪಿಸಲು ಸಹಕರಿಸಬೇಕೆಂದು ಸಂಘದ ಪರವಾಗಿ ಮನವಿ ಮಾಡಿಕೊಂಡರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ವೆಂಕಟ್ ನಾಯಕ್ ಅವರು ಮಾತನಾಡಿ, ರಾಮಾಯಣ ಗ್ರಂಥದ ಪಿತಾಮಹ ಮಹರ್ಷಿ ವಾಲ್ಮೀಕಿ ಅವರು ರಾಮರಾಣ ಉಲ್ಲೇಖದ ಒಂದು ಗ್ರಂಥ ಬರೆದ ಒಬ್ಬ ಶ್ರೇಷ್ಠ ಕವಿ, ಸುಮಾರು 24000 ಶ್ಲೋಕ ಗಳನ್ನು ಒಳಗೊಂಡ ಗ್ರಂಥವಿದ್ದು, ನಮ್ಮ ರಾಷ್ಟ್ರದ ಮೊದಲ ಕವಿಯು ಅವರೇ ಆಗಿದ್ದಾರೆ. ಸುಮಾರು 500 ವರ್ಷಗಳ ಹಿಂದೆಯೇ ರಾಮನ ವಿಚಾರಗಳನ್ನು ಉಲ್ಲೇಖ ಮಾಡಿದ ಕವಿ ವಾಲ್ಮೀಕಿ. ಅವರು ಹಲವಾರು ವರ್ಷಗಳ ತಪಸ್ಸನ್ನು ಮಾಡಿದ್ದರು, ಆಗ ದೇವರು ಅವರಿಗೆ ವರವನ್ನು ಕೊಟ್ಟು ನಂತರ ಅವರು ಮಹರ್ಷಿ ಆಗುತ್ತಾರೆ. ವಾಲ್ಮೀಕಿ ಮಹರ್ಷಿ ಅವರ ಕುರಿತು ಹಲವಾರು ಕವಿಗಳು ಕೃತಿಗಳನ್ನು ರೂಪಿಸಿದ್ದಾರೆ. ಎಂದುರು.
ಜಿ.ಪಂ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿ, ನಾಯಕ ಜನಾಂಗವು ಕರ್ನಾಟಕದ ಒಂದು ಪ್ರಮುಖ ಜನಾಂಗವಾಗಿದ್ದು, ನಾಯಕ ಜನಾಂಗಕ್ಕೆ ರಾಜ್ಯ ಮಟ್ಟದಲ್ಲಿ ಮನ್ನಣೆ ಸಿಗಬೇಕಿದೆ. ರಾಜ್ಯದಲ್ಲಿ ಸಾಮ್ರಾಜ್ಯ, ಕೋಟೆ ಕಟ್ಟುವಲ್ಲಿ ನಾಯಕ ಜನಾಂಗದ ಪಾತ್ರ ಬಹಳ ಇದೇ. ವಾಲ್ಮೀಕಿ ಅವರು ಮಹಾನ್ ಸಂತ ಮಹರ್ಷಿ ಆದ ವಿಚಾರಗಳನ್ನು ಮಾತನಾಡಿದರು.
ಮಹರ್ಷಿ ರಚಿಸಿದ ರಾಮಾಯಣವನ್ನು ಎಲ್ಲರು ಓದಬೇಕು ಮತ್ತು ಮೈಗೂಡಿಸಿಕೊಳ್ಳಬೇಕು ಎಂದರು.
ಸೋಮವಾರಪೇಟೆ ತಾಲ್ಲೂಕು ದಲಿತ ಸಂಘದ ಅಧ್ಯಕ್ಷ ನಿರ್ವಣಪ್ಪ ಮಾತನಾಡಿ ಈ ದಿನ ಬಹಳ ಮಹತ್ತರವಾದ ದಿನ, ವಾಲ್ಮೀಕಿ ಅವರ ಬಗ್ಗೆ ತಿಳಿದುಕೊಳ್ಳಲು ಈ ವೇದಿಕೆ ಒಂದು ಅವಕಾಶವಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಈ ಕಲಘಟ್ಟದ ಬೆಳವಣಿಗೆಗಳನ್ನು ನೋಡಿದರೆ ರಾಮರಾಜ್ಯದ ಕನಸಿಗೆ ವಿರೋಧವಾಗಿದೆ ಇದೆಲ್ಲವೂ ಸರಿಯಾಗಬೇಕು ಎಂದು ಶುಭ ಕೋರಿದರು.
ನಾಯಕ ಸಮಾಜದ ಸಾಧಕರಿಗೆ ಶಾಸಕರು ಮತ್ತು ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭ ಸೋಮವಾರಪೇಟೆ ತಹಶೀಲ್ದಾರ್ ಎಸ್. ಎನ್ ನರಗುಂದ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಟಿ ಪರಮೇಶ್, ತಾಲ್ಲೂಕು ನಿರ್ವಣಾಧಿಕಾರಿ ಜಯಣ್ಣ, ಕುಶಾಲನಗರ ಪುರಸಭೆ ಮುಖ್ಯಧಿಕಾರಿ ಕೃಷ್ಣ ಪ್ರಸಾದ್, ಕೊಡಗು ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ ಚಂದ್ರಕಲಾ, ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ ಮತ್ತು ನಾಯಕ ಸಮುದಾಯದ ಹಿರಿಯರು, ಪ್ರಮುಖರು, ಸರ್ಕಾರಿ ಸಿಬ್ಬಂಧಿಗಳು ಹಾಗೂ ಹಿತೈಷಿಗಳು ಹಾಜರಿದ್ದರು.