ಮಡಿಕೇರಿ ನ.15 : ಕೊಡಗು ಹೆಗ್ಗಡೆ ಸಮಾಜದ ಪ್ರತಿನಿಧಿಗಳ ಸಭೆಯು ಸಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಮಾಜದ ವಾರ್ಷಿಕ ಕ್ರೀಡೋತ್ಸವವನ್ನು ಹಾತೂರು ಸರ್ಕಾರಿ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ 2024ರ ಮೇ 3 ರಿಂದ 5ರ ವರೆಗೆ ಮೂರು ದಿನಗಳ ಕಾಲ ಕ್ರಿಕೆಟ್, ಹಗ್ಗ ಜಗ್ಗಾಟ ಮತ್ತು ಮಹಿಳೆಯರಿಗೆ ಥ್ರೋ ಬಾಲ್ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಿ, ಕ್ರೀಡಾ ಕೂಟದ ಯಶಸ್ವಿಗೆ ಸರ್ವರ ಸಹಕಾರ ಕೋರಲಾಯಿತು.
ಕ್ರೀಡಾ ಕೂಟ ನಡೆಯುವ ದಿನಾಂಕಗಳಂದು ಕೊಡಗು ಹೆಗ್ಗಡೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಭೆಯಲ್ಲಿ ಮನವಿ ಮಾಡಿದರು.
ಹಂಪಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೂತನವಾಗಿ ಆಯ್ಕೆಯಾದ ತಂಬಂಡ ವಿಜಯ್ ಪೂಣಚ್ಚ ಅವರನ್ನು ಅಭಿನಂದಿಸಿ ಕ್ರೀಡೋತ್ಸವದಂದು ಅಭಿನಂದಿಸಲು ನಿರ್ಣಯ ಕೈಗೊಳ್ಳಲಾಯಿತು.
ಮುಂಬರುವ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಸದಸ್ಯರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯ ನೀಡುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರವ ಚಿಂತನೆ ಇದೆ ಎಂದು ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಇದೇ ಸಂದರ್ಭ ತಿಳಿಸಿದರು.
ನಂತರ ಕಾವೇರಿ ತೀರ್ಥ ಪೂಜೆ ಸಲ್ಲಿಸಿ, ವಿತರಿಸಲಾಯಿತು.
ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಕೋಶಾಧ್ಯಕ್ಷ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ಪಡಿಞರಂಡ ಪ್ರಭು ಕುಮಾರ್, ಮೂರೀರ ಕುಶಾಲಪ್ಪ, ಕೊಪ್ಪಡ ಪಟ್ಟು ಪಳಂಗಪ್ಪ, ಕೊಕ್ಕೇರ ಬೆಲ್ಲುಜಗನಾಥ್, ಪುದಿಯತಂಡ ಬೆಳ್ಯಪ್ಪ, ಪಂದಿಕಂಡ ಸುನಾ, ಪಂದಿಕಂಡ ನಾಗೇಶ್, ಮೂರೀರ ಶಾಂತಿ, ಮಲ್ಲಾಡ ಸುತಾ, ಚಳಿಯಂಡ ಕಮಲಾ ಹಾಜರಿದ್ದರು. ಸಭೆಯನ್ನು ಉಪಾಧ್ಯಕ್ಷರಾದ ಕೊರಕುಟ್ಟಿರ ಸರ ಚಂಗಪ್ಪ ಸ್ವಾಗತಿಸಿ, ವಂದಿಸಿದರು.