ಮಡಿಕೇರಿ ನ.15 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಸಂಭ್ರಮದಿಂದ ನಡೆಯಿತು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಅಶೋಕ್ ಸಂಗಪ್ಪ ಅಲೂರ್, ಹಳೆ ವಿದ್ಯಾರ್ಥಿ ಸಂಘ ಕ್ರಿಯಾಶೀಲವಾಗಿದ್ದು, ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕೊಡಗು ವಿಶ್ವವಿದ್ಯಾನಿಲಯದ ನಡುವೆ ಸಿಕ್ಕಿ ಸಂಕಷ್ಟದಲ್ಲಿರುವುದು ಎಲ್ಲರಿಗೂ ಅರಿವಿದೆ. ಈ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಪರಿಹಾರವಾಗಬೇಕಿದ್ದು, ಜನಪ್ರತಿನಿಧಿಗಳು ಈ ವಿಚಾರವಾಗಿ ಸಹಕರಿಸಬೇಕೆಂದರು.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಡಕಾಗದಂತೆ ಪೂರ್ಣ ಪ್ರಯತ್ನ ಕೈಗೊಳ್ಳಲಾಗುವುದೆಂದೆಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಡಾ.ಪಾರ್ವತಿ ಅಪ್ಪಯ್ಯ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು 75 ವರ್ಷಗಳನ್ನು ಪೂರೈಸಿದೆ. ಇತ್ತೀಚೆಗೆ ಕಾಲೇಜಿನಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸಿದ್ದು, ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳ ಕುರಿತಂತೆ ಮಾತುಕತೆ ನಡೆಯುತ್ತಿದೆ, ಕಾಲೇಜಿನ ಸಮಸ್ಯೆಗಳ ಕುರಿತು ವಿವರವಾದ ಮಾಹಿತಿ ನೀಡಲಾಗಿದೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘ ಕಾಲೇಜಿನ ಚಟುವಟಿಕೆಗಳಿಗೆ ಅತ್ಯುತ್ತಮ ಬೆಂಬಲ ನೀಡುತ್ತಿದೆ. ಕಾಲೇಜಿನಲ್ಲಿ ಪ್ರಸ್ತುತ ಇರುವ ಸಮಸ್ಯೆಗಳಿಗೆ ಸರ್ಕಾರದಿಂದ ಸಿಗಬೇಕಿರುವ ಸೌಲಭ್ಯ, ನೆರವು ಬರದಿರುವುದು ಬೇಸರದ ವಿಚಾರ. ಇದ್ದಂತಹ ಉಪನ್ಯಾಸಕರನ್ನು ವರ್ಗಾವಣೆಗೊಳಿಸಲಾಗಿದ್ದು, ಕಾಲೇಜಿಗೆ ಉಪನ್ಯಾಸಕರ ಕೊರತೆ ಕಾಡುತ್ತಿದೆ. ಆದರೆ ಇರುವ ಉಪನ್ಯಾಸಕರನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಪ್ರಾಂಶುಪಾಲರು ಹಾಗೂ ಉಪಕುಲಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ರ‍್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ, ಸೊಡರು ಪುಸ್ತಕ ವಿಮರ್ಶೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು.
ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.