ಕುಶಾಲನಗರ/ ಕೂಡಿಗೆ ನ.19 : ಕೊಡಗು ಜಿಲ್ಲಾ ಪಂಚಾಯ್ತಿ, ಜಿಲ್ಲಾ
ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸ್ವಚ್ಛ್ ಭಾರತ್ ಮಿಷನ್ ವತಿಯಿಂದ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿ ಹಾಗೂ
ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಇಕೋ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಎಸ್ ಡಿ ಎಂ ಸಿ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಹಾಗೂ ‘ ಗೋ ಗ್ರೀನ್ ಅಭಿಯಾನ’ದಡಿ “ಬದಲಾವಣೆಯನ್ನು ವೇಗಗೊಳಿಸುವುದು’ ಎಂಬ ಧ್ಯೇಯದೊಂದಿಗೆ ” ವಿಶ್ವ ಶೌಚಾಲಯ ದಿನ”-2023 ದ ಜನಜಾಗೃತಿ ನಡೆಸಲಾಯಿತು. “ವಿಶ್ವ ಶೌಚಾಲಯ ದಿನ*ದ ಮಹತ್ವ ಹಾಗೂ ಶೌಚಾಲಯ ಸ್ವಚ್ಛತೆ ಕುರಿತು ಕುರಿತು ಮಾಹಿತಿ ನೀಡಿದ ಶಾಲಾ
ಮುಖ್ಯೋಪಾಧ್ಯಾಯರೂ ಆದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಜಿಲ್ಲಾ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ,
ಶೌಚಾಲಯಗಳು ಸಾರ್ವಜನಿಕ ಆರೋಗ್ಯದ ಅಡಿಪಾಯವಾಗಿದ್ದು, ಆರೋಗ್ಯ,ನೈರ್ಮಲ್ಯ ಹಾಗೂ ಸ್ವಚ್ಚತೆ ಕಾಪಾಡುವುದರೊಂದಿಗೆ
ಪರಿಸರವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದರು.
ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗು ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು. ಸ್ವಚ್ಛ ಶೌಚಾಲಯಗಳು ನಾಗರಿಕತೆಯ ಸಂಕೇತಗಳಾಗಿವೆ. ಸರಿಯಾದ ನೈರ್ಮಲ್ಯ ಅಭ್ಯಾಸಗಳನ್ನು
ಉತ್ತೇಜಿಸಲು ಎಲ್ಲರಿಗೂ ಶೌಚಾಲಯ ಪ್ರವೇಶಗಳನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗೋಣ ಎಂದು ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್
ಪ್ರತಿಜ್ಞಾ ವಿಧಿ ಬೋಧಿಸಿದರು. ಶೌಚಾಲಯ ಸ್ವಚ್ಛಗೊಳಿಸುವ ಸಂಕಲ್ಪ ಎಲ್ಲರ ಜವಾಬ್ದಾರಿಯಾಗಿದೆ. ನಾವು ಬಳಸಿದ ಶೌಚಾಲಯವನ್ನು ಸ್ವತಃ ನಾವೇ ಸ್ವಚ್ಚಗೊಳಿಸುವ ಮೂಲಕ ಮತ್ತೊಬ್ಬರು ಅದೇ ಶೌಚಾಲಯವನ್ನು ಬಳಸುವ ರೀತಿಯಲ್ಲಿ ಸ್ವಚ್ಛಗೊಳಿಸುವುದು ನಮ್ಮ ಹೊಣೆಯಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.
ಶೌಚಾಲಯ ದಿನದ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿದ
ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಮಾತನಾಡಿ,
ಶೌಚಾಲಯದ ಸ್ವಚ್ಛತೆ ಕುರಿತು
ನಾವೆಲ್ಲರೂ ಸ್ವಚ್ಛ ಮತ್ತು ಅಚ್ಚುಕಟ್ಟಾದ ಶೌಚಾಲಯಗಳಿಗೆ ಅರ್ಹರು.
ಬಯಲು ಶೌಚ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ.ಆದ್ದರಿಂದ,
ಪ್ರತಿ ಮನೆಗೂ ಶೌಚಾಲಯ ಹೊಂದಬೇಕು. ಶೌಚಾಲಯ ಹೊಂದಿರದ ಕುಟುಂಬಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಶೌಚಾಲಯವನ್ನು ನಿರ್ಮಿಸಿಕೊಡಲಾಗುವುದು ಎಂದರು.
ಈ ಶಾಲೆಯಲ್ಲಿ ಪರಿಸರ ಮತ್ತು ಸ್ವಚ್ಚತೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತಿರುವುದು ಸಂತಸ ತಂದಿದೆ. ಈ ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರೇ ಸ್ವತಃ ಶಾಲಾ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಚತೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗು ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಶೌಚಾಲಯ ದಿನ ಆಚರಿಸಲಾಗುತ್ತಿದೆ ಎಂದರು. 2030ರ ವೇಳೆಗೆ ವಿಶ್ವದ ಎಲ್ಲ ವೈಕ್ತಿಯೂ ಸುರಕ್ಷಿತ ಶೌಚಾಲಯ ಹೊಂದುವಂತೆ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಭಾಸ್ಕರ್ ನಾಯಕ್ ಹೇಳಿದರು. ಶಾಲಾ ಶೌಚಾಲಯದ ಸ್ವಚ್ಛತೆ ಕುರಿತು ಮಾತನಾಡಿದ
ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ,
ನಾವು ಪ್ರತಿನಿತ್ಯ ಬಳಸುವ ಶೌಚಾಲಯವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಮೂಲಕ ಉತ್ತಮ ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಹಾಗೆಯೇ, ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸ್ವಚ್ಛತೆಗೂ ಹೆಚ್ಚಿನ ಗಮನ ಹರಿಸುವ ಮೂಲಕ ಉತ್ತಮ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.
ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ.ರಮ್ಯ, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಗ್ರಾ.ಪಂ.ಸಿಬ್ಬಂದಿಗಳಾದ ಎಂ.ಎಲ್.ಅವಿನಾಶ್, ಕೆ.ಎಸ್.ಮಮತ,ಜಯಪ್ರಭ, ಶಾಲಾ
ಸಿಬ್ಬಂದಿ ಎಂ.ಉಷಾ, ವಿದ್ಯಾರ್ಥಿಗಳು ಇದ್ದರು.
*ಜಾಗೃತಿ ಜಾಥಾ*: ಕೂಡ್ಲೂರು ಗ್ರಾಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ‘ವಿಶ್ವ ಶೌಚಾಲಯ ದಿನ’ದ ಅಂಗವಾಗಿ
‘ಸ್ವಚ್ಛ ಶಾಲೆ- ಸ್ವಚ್ಛ ಶೌಚಾಲಯ, ಸ್ವಚ್ಛ ಶೌಚಾಲಯ ಪ್ರತಿಯೊಬ್ಬರ ಹಕ್ಕು,
ನಿಮ್ಮ ಶೌಚಾಲಯವನ್ನು ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿಡಿ,
ಶೌಚಾಲಯದ ಮಹತ್ವವನ್ನು ಕಡಿಮೆ ಮಾಡಬೇಡಿ, ಸ್ವಚ್ಛ ಶೌಚಾಲಯವೇ
ಸುರಕ್ಷಿತ ಶೌಚಾಲಯ, ‘ನಾವು ಬಯಲು ಶೌಚಕ್ಕೆ ಕಡಿವಾಣ ಹಾಕೋಣ’
ಎಂಬಿತ್ಯಾದಿ ಘೋಷಣೆಗಳ ಭಿತ್ತಿ ಫಲಕಗಳನ್ನು ಹಿಡಿದು ಜನರಲ್ಲಿ ವಿಶ್ವ ಶೌಚಾಲಯ ದಿನದ ಮಹತ್ವದ ಕುರಿತು ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಿದರು.
ಶಿಕ್ಷಕರು ಮಕ್ಕಳಿಗೆ ‘ಶೌಚಾಲಯ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡೋಣ
ಬನ್ನಿ’ ಎಂದು ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ
ಸ್ವೀಕರಿಸಿದರು.