ಮಡಿಕೇರಿ ಡಿ.7 : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ವತಿಯಿಂದ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಪರಿನಿರ್ವಾಣ ದಿನದ ಅಂಗವಾಗಿ ನೇತ್ರದಾನ, ದೇಹದಾನ ನೋಂದಾವಣಿ ಮತ್ತು ರಕ್ತದಾನ ಕಾರ್ಯಕ್ರಮ ನಡೆಯಿತು. 12 ಮಂದಿ ನೇತ್ರದಾನ ಹಾಗೂ ನಾಲ್ವರು ದೇಹದಾನಕ್ಕೆ ಹೆಸರು ನೋಂದಾಯಿಸಿಕೊಂಡರು.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಅಂಬೇಕಲ್ಲು ನವೀನ್ ಕುಶಾಲಪ್ಪ, ನೇತ್ರದಾನ, ದೇಹದಾನ ಮಾಡುವುದು ಮಹತ್ವದ ಕೆಲಸ. ದಸಂಸ ಸೇವಾ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ.ಕೆ.ಪಿ.ಕರುಂಬಯ್ಯ ಮಾತನಾಡಿ, ರಕ್ತದಾನದಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಉಂಟಾಗುತ್ತದೆ ಎಂಬ ಮೌಢ್ಯತೆ ಮರೆತು, ಸಾಮಾಜಿಕ ಕಳಕಳಿಯ ಬದ್ಧತೆ ತೋರಬೇಕೆಂದು ಕರೆ ನೀಡಿದರು.
ರಕ್ತ, ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು, ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಧರಿದ್ದು, ನಮ್ಮ ಸಾವಿನ ನಂತರ ಅವರಿಗೆ ಬೆಳಕಗಾಬಹುದು ಎಂದು ತಿಳಿಸಿದರು.
ದೇಶದಲ್ಲಿ ರಕ್ತದ ಬೇಡಿಕೆಯೂ ಹೆಚ್ಚಿದೆ. ಅದನ್ನು ನೀಗಿಸಲು ರಕ್ತದಾನಕ್ಕೆ ಆರೋಗ್ಯವಂತ ವ್ಯಕ್ತಿ ಮುಂದಾಗಬೇಕು. ಶಾಲಾ ಮಟ್ಟದಿಂದ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು. ರಕ್ತದಾನದ ಕುರಿತು ಕೆಲವರಿಗೆ ಮೂಡನಂಬಿಕೆ ಇದೆ. ರಕ್ತದಾನದಿಂದ ಯಾವುದೇ ಸಮಸ್ಯೆ ಬರುವುದಿಲ್ಲ. ಮೂಡನಂಬಿಕೆಯನ್ನು ಬಿಟ್ಟು ವರ್ಷಕೊಮ್ಮೆ ರಕ್ತದಾನ ಮಾಡಿದರೆ ಹಲವು ರೋಗಗಳು ದೂರವಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ, ಮನುಕುಲದ ಏಳಿಗೆಗೆ, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಮಾಡಿದ ತ್ಯಾಗ, ಸಮರ್ಪಣ ಮನೋಭಾವ ಸದಾ ಸ್ಮರಣೀಯ. ಅವರ ಮಹತ್ವಾಕಾಂಕ್ಷೆ ಕೆಲಸಗಳು ಇಂದಿಗೂ ಜೀವಂತವಾಗಿವೆ. ಅವರ ಆದರ್ಶ ಜೀವನದಲ್ಲಿ ರೂಡಿಸಿಕೊಳ್ಳಬೇಕು. ಮನುಷ್ಯತ್ವ, ಕರುಣೆ, ಮಾನವೀಯ ಗುಣಗಳಿಂದ ಪರಿಪೂರ್ಣ ಬದುಕು ಸಾಧ್ಯವಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಮಧುಕರ್ ಶೇಟ್ ಮಾತನಾಡಿ, ಯಾವುದೇ ಜಾತಿಗೆ ಸೀಮಿತವಾಗದೆ ಭಾರತೀಯ ಎಂಬ ದೃಢ ಸಂಕಲ್ಪ ಹೊಂದಿದರೆ ಸದೃಢ ಸಮಾಜ ನಿರ್ಮಿಸಬಹುದು. ಅಂಬೇಡ್ಕರ್ ಚಿಂತನೆ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ಅಂಬೇಡ್ಕರ್ ಅವರ ಮುಂದಾಲೋಚನೆಯಿಂದ ಉತ್ತಮ ಸಮಾಜ ನಿರ್ಮಾಣವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಸಮಿತಿ ವತಿಯಿಂದ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಹೆಚ್.ವಿ.ದೇವದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತ್ರ ತಜ್ಞ ಡಾ.ನಿರಂಜನ್, ಮತ್ತಿತರರು ಉಪಸ್ಥಿತರಿದ್ದರು.
::: ಶ್ವೆಟರ್ ವಿತರಣೆ :::
ಜಿಲ್ಲಾಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಹೆಚ್.ವಿ.ದೇವದಾಸ್ ಅವರ ಜನ್ಮ ದಿನದ ಹಿನ್ನೆಲೆ ದಲಿತ ಸಂಘರ್ಷ ಸಮಿತಿ ಇದೇ ಸಂದರ್ಭ ನಗರದ ನಗರಸಭಾ ಶಾಲಾ ವಿದ್ಯಾರ್ಥಿಗಳಿಗೆ ಶ್ವೆಟರ್ ಗಳನ್ನು ವಿತರಿಸಿತು.











