ವಿರಾಜಪೇಟೆ ಡಿ.28 : ಹೆಗ್ಗಳ ಗ್ರಾಮದ ಎಡಮಕ್ಕಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆಯನ್ನು ಭಕ್ತಿಯಿಂದ ಜರುಗಿತು.
ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ, ಹಾಲು ಹಾಗೂ ಎಳನೀರಿನ ಅಭಿಷೇಕ ನೆರವೇರಿಸಿ ಭಸ್ಮಾರ್ಚನೆಯನ್ನು ಮಾಡಲಾಯಿತು.
ಮಂಡಲ ಪೂಜೆಯ ಪ್ರಧಾನ ಆಚರಣೆಯಾದ ದೀಪಾರಾಧನೆ ನಡೆಸಿ ದೇವಸ್ಥಾನದೆಲ್ಲೆಡೆಗಳಲ್ಲಿ ದೀಪಗಳನ್ನು ಬೆಳಗಿ ವಿಶೇಷ ಅರ್ಚನೆ ನಡೆಯಿತು.
ಭಕ್ತರು ಧರ್ಮ ಶಾಸ್ತನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಮಹಾಪೂಜೆ ಹಾಗೂ ಮಂಗಳಾರತಿಯ ಬಳಿಕ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ಸಮೀಪದ ಹೆಗ್ಗಳ, ತೋರ, ಬೂದಿಮಾಳ, ರಾಮನಗರ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ದೇವಾಲಯದ ಪ್ರಧಾನ ಅರ್ಚಕ ವೇಣುಗೋಪಾಲ್ ಭಟ್ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.

















