ಮಡಿಕೇರಿ ಫೆ.26 NEWS DESK : ಟಿ.ಎಂ.ವಿಜಯಭಾಸ್ಕರ್ ಅವರು ಸಲ್ಲಿಸಿರುವ ಆಡಳಿತ ಸುಧಾರಣೆ ವರದಿಯನ್ನು ತಕ್ಷಣಕ್ಕೆ ಜಾರಿ ಮಾಡುವುದಿಲ್ಲ ಎಂದು ಅರಣ್ಯ ಸಚಿವರು ದೂರವಾಣಿ ಮೂಲಕ ನನಗೆ ತಿಳಿಸಿದ್ದಾರೆ. ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಸೂಕ್ತ ಕ್ರಮವನ್ನು ಜರುಗಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಆದ್ದರಿಂದ ಅರಣ್ಯ ಕಾಲೇಜು ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲವೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಪ್ರತಿಭಟನಾ ನಿರತರಿಗೆ ಅಭಯ ನೀಡಿದ್ದಾರೆ.
ಕರ್ನಾಟಕ ಅರಣ್ಯ ವಿದ್ಯಾರ್ಥಿಗಳು ಮತ್ತು ಪದವೀದರರ ಅಸೋಸಿಯೇಷನ್ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಅರಣ್ಯ ಪದವೀದರ ವಿದ್ಯಾರ್ಥಿಗಳ ವೃತ್ತಿ ಜೀವನ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಅರಣ್ಯ ವಿದ್ಯಾರ್ಥಿಗಳ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಿ ಪುರಸ್ಕರಿಸಬೇಕೆಂದು ತಾವು ಮುಖ್ಯಮಂತ್ರಿಗಳು, ಅರಣ್ಯ ಮತ್ತು ಕೃಷಿ ಸಚಿವರಿಗೆ ಪತ್ರವನ್ನು ಬರೆದಿದ್ದೇನೆ ಎಂದು ತಿಳಿಸಿದರು.
ನಾನು ಕೂಡ ಕಾನೂನಾತ್ಮಕವಾಗಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡಿ ಮುಖ್ಯಮಂತ್ರಿಗಳಿಗೆ ಹಾಗೂ ಅರಣ್ಯ ಸಚಿವರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡಿ ಇದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತೇನೆ. ಮುಖ್ಯ ಬೇಡಿಕೆಯಾದ ಅರಣ್ಯ ಪದವೀದರರಿಗೆ ಮಾತ್ರ ಹುದ್ದೆಯನ್ನು ಮೀಸಲಿಡುವುದರ ಬಗ್ಗೆ ಅಧ್ಯಯನ ಮಾಡಬೇಕಾಗಿದ್ದು, ಅದಕ್ಕೆ ಕಾಲಾವಕಾಶ ಬೇಕು. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನಾನು ಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ಪ್ರತಿಭಟನೆ ಕೈಬಿಟ್ಟು ತಕ್ಷಣ ಕಾಲೇಜಿಗೆ ತೆರಳುವಂತೆ ಮನವಿ ಮಾಡಿದರು.