ಮಡಿಕೇರಿ ಮಾ.8 NEWS DESK : ಕೊಡಗಿನ ವೀರ ಪುತ್ರ, ವೀರಸೇನಾನಿ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯನವರ ಅತ್ಯಾಕರ್ಷಕವಾದ ಮತ್ತು ಯುವ ಸಮೂಹಕ್ಕೆ ಪ್ರೇರಣಾ ದಾಯಕವಾದ ನೂತನ ಪ್ರತಿಮೆಯನ್ನು ನಗರದಲ್ಲಿ ಸಕಲ ಗೌರವಗಳೊಂದಿಗೆ ಮರುಸ್ಥಾಪನೆ ಮಾಡಲಾಯಿತು.
ಜಿಲ್ಲಾಡಳಿತ, ನಗರಸಭೆಯ ಉಸ್ತುವಾರಿಯಲ್ಲಿ ನಿರ್ಮಾಣಗೊಂಡ ನೂತನ ವೃತ್ತದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಯನ್ನು, ಪುಷ್ಪನಮನದ ಮೂಲಕ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ಅನಾವರಣಗೊಳಿಸಿದರು.
ಸಂದರ್ಭ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭ ಮಾಜಿ ಸಚಿವ ಎಂ.ಸಿ. ನಾಣಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‍ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇ.ಜ. ಬಿ.ಎ.ಕಾರ್ಯಪ್ಪ ಒಳಗೊಂಡಂತೆ ಮಾಜಿ ಸೈನಿಕರು, ಸಾರ್ವಜನಿಕರು ಜ.ತಿಮ್ಮಯ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಪ್ರತಿಮೆಗೆ ಭವ್ಯ ಸ್ವಾಗತ : ಮೈಸೂರಿನಿಂದ ಸಜ್ಜುಗೊಂಡು ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತಕ್ಕೆ ಆಗಮಿಸಿದ ಜ.ತಿಮ್ಮಯ್ಯ ಪ್ರತಿಮೆಯನ್ನು ಹೊತ್ತ ಪ್ರತಿಮ ಮರು ಸ್ಥಾಪನಾ ವಾಹನವನ್ನು ಶಾಸಕರಾದಿಯಾಗಿ, ವಿವಿಧ ಸಂಘ ಸಂಸ್ಥೆಗಳು ಗೌರವ ಪೂರ್ವಕವಾಗಿ ಸ್ವಾಗತಿಸಿದರು.
ಬಳಿಕ ವೀರಸೇನಾನಿಯ ಪ್ರತಿಮೆಯ ಮೆರವಣಿಗೆಯನ್ನು ಸಾಂಪ್ರದಾಯಿಕ ಕೊಂಬ್ ಕೊಟ್ಟ್ ವಾಲಗದೊಂದಿಗೆ ನೂತನ ವೃತ್ತದ ವರಗೆ ನಡೆಸಲಾಯಿತು. ಕೊಡವ ಉಡುಪಿನೊಂದಿಗೆ ವಿವಿಧ ಸಂಘ ಸಂಸ್ಥೆಗಳು , ಜ.ತಿಮ್ಮಯ್ಯ ಶಾಲಾ ಎನ್‍ಸಿಸಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಮಾಜಿ ಸೈನಿಕರು ಮೆರವಣಿಗೆಯಲ್ಲಿ ಸಾಗಿ ಬಂದುದು ವಿಶೇಷ. ಬೈಕ್ ಜಾಥವು ಗಮನ ಸೆಳೆಯಿತು.










