ಮಡಿಕೇರಿ ಜು.11 NEWS DESK : ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಅಲ್ಪಸಂಖ್ಯಾತರಿಗೆ ನಿಗಮ, ಮಂಡಳಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನೀಡದೆ ಕಡೆಗಣಿಸಲಾಗಿದೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಮೂರ್ನಾಡು ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಅಲ್ಪಸಂಖ್ಯಾತರ ಮತಗಳ ಕ್ರೋಢೀಕರಣವೇ ಕಾರಣವಾಗಿದೆ. ಸುಮಾರು 80 ಸಾವಿರ ಮುಸಲ್ಮಾನರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿ ಗೆಲುವು ತಂದು ಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ನೇಮಕಗೊಂಡ ಮೂಡ, ಕುಡಾ ಸೇರಿದಂತೆ ವಿವಿಧ ಆಡಳಿತ ಮಂಡಳಿಗಳಲ್ಲಿ ಮುಸಲ್ಮಾನರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲವೆಂದು ಟೀಕಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡಬೇಕೆನ್ನುವ ಹಲವು ವರ್ಷಗಳ ಬೇಡಿಕೆ ಇಲ್ಲಿಯವರೆಗೆ ಈಡೇರಿಲ್ಲ. ಮತಬ್ಯಾಂಕ್ ನ ಋಣ ಸಂದಾಯಕ್ಕಾಗಿ ಕೊಡಗಿನ ಅಲ್ಪಸಂಖ್ಯಾತರೊಬ್ಬರಿಗೆ ವಿಧಾನ ಪರಿಷತ್ ಸ್ಥಾನವನ್ನು ನೀಡಬೇಕಾಗಿತ್ತು. ಆದರೆ ಕಾಂಗ್ರೆಸ್ ಅದರ ಬಗ್ಗೆ ಆಸಕ್ತಿಯನ್ನೇ ತೋರಿಲ್ಲ. ಈ ಬಾರಿ ಮೂಡ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರ ಪಾಲಾಗಲಿದೆ ಎನ್ನುವ ನಿರೀಕ್ಷೆ ಇತ್ತದರೂ ಇದು ಕೂಡ ಕೈತಪ್ಪಿ ಹೋಗಿದೆ.
ಕೆಲವು ವರ್ಷಗಳ ಹಿಂದೆ ಜೆಡಿಎಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮುನೀರ್ ಅಹಮ್ಮದ್ ಅವರಿಗೆ ಮೂಡ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರು ಗುರುತಿಸಿಕೊಂಡಿದ್ದಾಗ ಸಮಾನ ಅವಕಾಶಗಳನ್ನು ನೀಡಲಾಗಿದೆ. ಅಲ್ಪಸಂಖ್ಯಾತರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದ ಹೆಗ್ಗಳಿಕೆ ಜೆಡಿಎಸ್ ಪಕ್ಷದ್ದಾಗಿದೆ.
ಆದರೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಪ್ರಚಾರ, ಪ್ರತಿಭಟನೆ, ವಿಜಯೋತ್ಸವ, ಜನ್ಮ ದಿನೋತ್ಸವ ಮತ್ತು ಮತ ಬ್ಯಾಂಕ್ ಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಕೆ.ಜಿ.ಜಾಶಿರ್ ಆರೋಪಿಸಿದ್ದಾರೆ.
ಕೇವಲ ಗೆಲುವಿಗಾಗಿ ತಮ್ಮನ್ನು ಬಳಸಿಕೊಳ್ಳುವ ಕಾಂಗ್ರೆಸ್ ಬಗ್ಗೆ ಇನ್ನಾದರು ಅಲ್ಪಸಂಖ್ಯಾತರು ಜಾಗೃತಗೊಳ್ಳಬೇಕಾಗಿದೆ. ಇಲ್ಲಿಯವರೆಗಿನ ರಾಜಕೀಯ ಬೆಳವಣಿಗೆಗಳ ಕುರಿತು ಆತ್ಮಾವಲೋಕನ ಮಾಡಿಕೊಂಡು ಪರ್ಯಾಯ ಶಕ್ತಿಯಾಗಿ ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರು ಗುರುತಿಸಿಕೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.