ಮಡಿಕೇರಿ ಸೆ.25 NEWS DESK : ಜಾತ್ಯತೀತ ಜನತಾದಳ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರಬಲವಾಗಿದೆ. ಪಕ್ಷಕ್ಕೆ ಮತ್ತಷ್ಟು ಬಲ ತುಂಬಿ ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೆ.27 ರಿಂದ ಜಿಲ್ಲೆಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗುತ್ತಿದೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಿಗ್ಗೆ ಬೆಳಿಗ್ಗೆ 11.30 ಗಂಟೆಗೆ ಮಡಿಕೇರಿಯ ಹೊಟೇಲ್ ರಾಜದರ್ಶನ ಸಭಾಂಗಣದಲ್ಲಿ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಶಾಸಕ ಎ.ಮಂಜು ಅವರ ನೇತೃತ್ವದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಲೋಕಸಭಾ ಚುನಾವಣೆಯ ನಂತರ ವರಿಷ್ಠರ ಆದೇಶದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳು ಬರಲಿದ್ದು, ಸದಸ್ಯತ್ವ ಅಭಿಯಾನದ ಮೂಲಕ ಜೆಡಿಎಸ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. ಜಿಲ್ಲೆಯ ಗ್ರಾಮೀಣ ಭಾಗದಿಂದಲೇ ಸದಸ್ಯತ್ವವನ್ನು ಹೆಚ್ಚು ಮಾಡಲು ನಿರ್ಧರಿಸಲಾಗಿದೆ. ಹಲವು ಭಾಗಗಳಲ್ಲಿ ಜೆಡಿಎಸ್ ಬೇರೂರಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇನ್ನು ಮುಂದೆಯೂ ಪಕ್ಷದ ಬಲವನ್ನು ಹೆಚ್ಚಿಸಿಕೊಂಡು ರಾಜಕೀಯವಾಗಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಸದಸ್ಯ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು. ರಾಜಕೀಯವಾಗಿ ಯಾವುದೇ ಬದಲಾವಣೆಗಳಾಗಬಹುದು, ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮುಂದೆ ಜನ ಬದಲಾವಣೆ ಬಯಸಿ ಜೆಡಿಎಸ್ ಗೆ ಅಧಿಕಾರ ನೀಡಬಹುದು ಎಂದು ವಿಶ್ವ ವಿಶ್ವಾಸ ವ್ಯಕ್ತಪಡಿಸಿದರು. ಕುಶಾಲನಗರ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ನೀತಿಗೆ ವಿರುದ್ಧವಾಗಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದರೆ ಪಕ್ಷದ ವರಿಷ್ಠರು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಮೂರ್ನಾಡು ಅವರು ಮಾತನಾಡಿ, ಜಾತ್ಯತೀತ ಜನತಾದಳಕ್ಕೆ ರಾಜಕೀಯವಾಗಿ ಕೊಡಗು ಜಿಲ್ಲೆ ನಿರ್ಣಾಯಕ ಕೊಡುಗೆಯನ್ನು ನೀಡದಿದ್ದರೂ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಜನರ ಮೇಲಿನ ಪ್ರೀತಿಯಿಂದ ದೊಡ್ಡ ಕೊಡುಗೆಗಳನ್ನೇ ನೀಡಿದ್ದಾರೆ. ಯಾವುದೇ ಸರ್ಕಾರಗಳು ನೀಡದಷ್ಟು ಅನುದಾನವನ್ನು ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಇದರ ಆಧಾರದಲ್ಲಿ ಜಿಲ್ಲೆಯ ಜನ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಪೂರಕ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಅಧ್ಯಕ್ಷ ರವಿಕಿರಣ್ ಶೆಟ್ಟಿ, ವಿರಾಜಪೇಟೆ ಅಧ್ಯಕ್ಷ ಪಿ.ಎ.ಮಂಜುನಾಥ್, ಸೋಮವಾರಪೇಟೆ ಅಧ್ಯಕ್ಷ ಸಿ.ಎಲ್.ನಾಗರಾಜು ಹಾಗೂ ಕುಶಾಲನಗರ ಅಧ್ಯಕ್ಷ ಕೋಟಿ ರಾಮಣ್ಣ ಉಪಸ್ಥಿತರಿದ್ದರು.