ಮಡಿಕೇರಿ NEWS DESK ಅ.9 : ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿರುವ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಸಾಹಿತ್ಯ ಕ್ಷೇತ್ರ ಮತ್ತು ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ ನೀಡಿದ್ದಾರೆ. ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ನಡೆದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ ಸೇರಿದಂತೆ ಇತರೆ ಭಾಷೆಗಳಿಗೂ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ, ಜೊತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಬೇಕು ಎಂದು ಸಲಹೆ ನೀಡಿದರು. ಕತೆ, ಕವನ, ಕಾದಂಬರಿ, ಹಾಸ್ಯ ಲೇಖನಗಳು, ವಿಡಂಬಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವಕಾಶಗಳು ಹೆಚ್ಚು ಲಭಿಸಲಿವೆ. ಆ ನಿಟ್ಟಿನಲ್ಲಿ ಎಲ್ಲರಿಗೂ ಪ್ರೋತ್ಸಾಹಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಸಂಗೀತ ನಿರ್ದೇಶಕ ಎಂ.ಆರ್.ಚರಣ್ ರಾಜ್ ಅವರು ಮಾತನಾಡಿ ಸಾಹಿತ್ಯ ಮತ್ತು ಸಂಗೀತಕ್ಕೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳು ಪ್ರತಿಯೊಬ್ಬರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಕಲೆ, ಸಾಹಿತ್ಯ, ಸಂಗೀತ ವಿಚಾರಗಳು, ಆಲೋಚನೆಗಳು ಪ್ರಬುದ್ಧತೆಯನ್ನು ಹೆಚ್ಚಿಸುತ್ತವೆ. ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದರು. ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರು ಮಾತನಾಡಿ ಮೈಸೂರು ಮತ್ತು ಮಡಿಕೇರಿ ದಸರಾಕ್ಕೆ ವಿಶೇಷ ಸ್ಥಾನವಾಗಿದೆ. ಇದೊಂದು ರೀತಿ ಪ್ರಜಾಪ್ರಭುತ್ವ ಹಬ್ಬವಾಗಿದೆ ಎಂದು ಹೇಳಿದರು. ದಸರಾವು ಎಲ್ಲ ಜನರನ್ನು ಒಳಗೊಂಡ ಉತ್ಸವವಾಗಿದ್ದು, ನಾಡಿನ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರತಿಬಿಂಭಿಸುವ ದಸರಾವಾಗಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದವರಿಗೆ ಹೆಚ್ಚು ಹೆಚ್ಚು ಅವಕಾಶ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು. ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಅವರು ಮಾತನಾಡಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ಕೊಡಲಾಗಿದೆ. ಕವಿಗೋಷ್ಠಿಗಳು ಕವಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾತ್ರವಲ್ಲ. ಭಾಷೆ ಬೆಳವಣಿಗೆಗೆ ಸಹಕಾರಿಯೂ ಹೌದು. ಜೀವನೋತ್ಸಾಹವನ್ನೂ ತುಂಬುತ್ತದೆ ಎಂದು ಹೇಳಿದರು. ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷÀ ಬಿ.ಜಿ.ಅನಂತಶಯನ ಅವರು ಮಾತನಾಡಿ ಕವನ ರಚನೆ ಆರಂಭಿಸಿದ ನಂತರವೂ ಭಾವನೆಗಳು ಅರಳುವಂತೆ ಇರಬೇಕು. ಒಂದು ಮಾತು ನೋಡಿ ಉದ್ಭವ ಆದರೆ ಅದು ಸಹಜ ಭಾವ. ಭಾವನೆಗಳ ಸಹಜತೆಯೊಂದಿಗೆ ಬದುಕಬೇಕು. ಪಕ್ವತೆ ಬೆಳೆಸಿಕೊಂಡುವಾದಷ್ಟು ಪರಿಪೂರ್ಣ ಆಗಿರಲು ಪ್ರಯತ್ನಿಸಬೇಕು. ಬರವಣಿಗೆ ಸಂದರ್ಭ ಇಹದ ಎಲ್ಲಾ ಜಂಜಡಗಳನ್ನು ಮರೆಯಬೇಕು. ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಮಾತನಾಡಿ ಕವನ ಎಲ್ಲಿ ಬೇಕಾದರೂ ಹುಟ್ಟಬಹುದು. ದುಃಖದಲ್ಲಿ ಅರಳುವ ಕವನಗಳು ಮನೋಜ್ಞವಾಗಿರುತ್ತದೆ ಎಂದರು. ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಉಜ್ವಲ್ ರಂಜಿತ್, ನಗರ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ. ಅವರು ಮಾತನಾಡಿದರು. ಮಡಿಕೇರಿ ನಗರ ದಸರಾ ಸಮಿತಿ ಹೊರತಂದಿರುವ ‘ಕಾವ್ಯೋದ್ಯಾನ’ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.