ನಾಪೋಕ್ಲು ಅ.16 NEWS DESK : ಗ್ರಾಮೀಣ ಜನರು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮರಸ್ಯ ಮೂಡುತ್ತದೆ ಎಂದು ಮಾಜಿ ಸೈನಿಕ ಸಿ.ಸುರಿ ಮುತ್ತಪ್ಪ ಹೇಳಿದರು. ಮರಂದೋಡ ಗ್ರಾಮದಲ್ಲಿ ಮರಂದೋಡ ಕ್ರೀಡಾ ಸಮಿತಿ ವತಿಯಿಂದ ಮರಂದೋಡ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ 41ನೇ ವರ್ಷದ ವಾರ್ಷಿಕ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಸಮಿತಿಯ ಅಧ್ಯಕ್ಷ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗಾಗಿ ವಿವಿಧ ಕ್ರೀಡಾಕೂಟಗಳು ನಡೆದವು. ಮಕ್ಕಳು, ಮಹಿಳೆಯರು, ಪುರುಷರು ವಿವಿಧ ವಯೋಮಾನದವರು ಪಾಲ್ಗೊಂಡು ಸಂಭ್ರಮಿಸಿದರು. 0.22 ಶೂಟಿಂಗ್ ಸ್ಪರ್ಧೆಯಲ್ಲಿ ಬಾರಿಕೆ ಜೀವಿತ ಪ್ರಥಮ, ಮುಕ್ಕಾಟಿರ ಅಜಿತ್ ದ್ವಿತೀಯ ಸ್ಥಾನವನ್ನು ಪಡೆದರು. 12 ಬೋರ್ ಶೂಟಿಂಗ್ ಸ್ಪರ್ಧೆಯಲ್ಲಿ ಮುಕ್ಕಾಟಿರ ಅಜಿತ್ ಪ್ರಥಮ, ಮಾರ್ಚಂಡ ಮಂದಣ್ಣ ದ್ವಿತೀಯ ಸ್ಥಾನವನ್ನು ಗಳಿಸಿದರು. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಅಂಚೆ ಇಲಾಖೆಯ ನಿವೃತ್ತ ನೌಕರ ಬಾರಿಕೆರ ಜನಾರ್ಧನ್, ಹೆಚ್.ಎ.ಎಲ್ ನ ನಿವೃತ್ತ ಉದ್ಯೋಗಿ ಅನ್ನಾಡಿಯಂಡ ಪ್ರದೀಪ್ ಕುಮಾರ್, ನಿವೃತ್ತ ಸಿ.ಆರ್.ಪಿ.ಎಫ್ ಉದ್ಯೋಗಿ ಚೋಯಮಾಡಂಡ ಪವಿತ್ರ, ಮರಂದೋಡ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳ ದಾನಿಗಳಾದ ಚಂಡೀರ ಜಗದೀಶ್, ಕಕ್ಕಬ್ಬೆ ವಿಎಸ್‍ಎಸ್‍ಎನ್ ನಿರ್ದೇಶಕ ನಿಡುಮಂಡ ಹರೀಶ್ ಪೂವಯ್ಯ ಹಾಜರಿದ್ದರು. ವಿದ್ಯಾರ್ಥಿನಿ ಚಂಡಿರ ಪವಿ ಪೊನ್ನಮ್ಮ ಪ್ರಾರ್ಥಿಸಿದರು. ಕಾರ್ಯದರ್ಶಿ ಮುಕ್ಕಾಟಿರ ಅಜಿತ್ ಕಳೆದ ವರ್ಷದ ವಾರ್ಷಿಕ ವರದಿಯನ್ನು ವಾಚಿಸಿದರು, ಕ್ರೀಡಾ ಸಮಿತಿ ಸದಸ್ಯ ಚಂಡೀರ ರ್ಯಾಲಿ ಗಣಪತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದವರಿಗೆ ಸೂಜಿ ದಾರ ಓಟ, ಭಾರದ ಕಲ್ಲು ಎಸೆತ, ಮೇಣದ ಬತ್ತಿ ಓಟ, ಅಡಿಕೆ ಹಾಳೆಯಲ್ಲಿ ದಂಪತಿಗಳನ್ನು ಎಳೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮ ಜರುಗಿತು.
ವರದಿ : ದುಗ್ಗಳ ಸದಾನಂದ.