ಕುಶಾಲನಗರ ಡಿ.18 NEWS DESK : ಕುಶಾಲನಗರ ಪಟ್ಟಣ ಒಳಚರಂಡಿ ಯೋಜನೆ ಕಾಮಗಾರಿ ಸದ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಕುಶಾಲನಗರ ಪುರಸಭೆ ಸದಸ್ಯರಾದ ಡಿ.ಕೆ.ತಿಮ್ಮಪ್ಪ ತಿಳಿಸಿದ್ದಾರೆ. ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಸಹಯೋಗದೊಂದಿಗೆ ಹುಣ್ಣಿಮೆ ಅಂಗವಾಗಿ ನಡೆದ 167 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪುರಸಭೆ ವತಿಯಿಂದ ಈಗಾಗಲೇ ಪಟ್ಟಣ ವಿವಿಧ ಬಡಾವಣೆಗಳಲ್ಲಿ ನೇರವಾಗಿ ನದಿಗೆ ಸೇರುತ್ತಿದ್ದ ಕಲುಷಿತ ನೀರನ್ನು ನೈಸರ್ಗಿಕವಾಗಿ ಯು ಜಿ ಡಿ ಕೊಳವೆಗಳ ಮೂಲಕ ಹಾಯಿಸಿ ನದಿ ನೇರವಾಗಿ ಕಲುಷಿತಗೊಳ್ಳುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಹಿಂದಿನ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಹಾಗೂ ಈಗಿನ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಒಳಚರಂಡಿ ಯೋಜನೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು ಸದ್ಯದಲ್ಲೇ ಯೋಜನೆ ಪೂರ್ಣಗೊಂಡು ನದಿ ಕಲುಷಿತ ಮತ್ತು ಪಟ್ಟಣದ ಸ್ವಚ್ಛತೆಯ ಗುರಿ ಈ ಮೂಲಕ ಸಾಧನೆ ಸಾಧ್ಯವಾಗಲಿದೆ ಎಂದರು. ನಿರಂತರವಾಗಿ ಜೀವನದಿ ಕಾವೇರಿಗೆ ಆರತಿ ಬೆಳಗುವ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಆರತಿ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಆರತಿ ಕಟ್ಟೆ ನಿರ್ಮಾಣ, ಅನ್ನದಾಸೋಹ ಭವನ ನಿರ್ಮಾಣ ಹಾಗೂ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಶಾಶ್ವತ ಕೆರೆ ನಿರ್ಮಿಸಲು ಕೂಡ ಪುರಸಭೆಯಿಂದ ಚಿಂತನೆ ಹರಿಸಲಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಬಿ ಪಿ ಗಣಪತಿ ಕುಶಾಲನಗರದಲ್ಲಿ ಕಳೆದ 14 ವರ್ಷಗಳಿಂದ ಆರಂಭಗೊಂಡ ಕಾವೇರಿ ಆರತಿ ಮೂಲಕ ಕಾವೇರಿ ಕೂಗು ರಾಜ್ಯ ರಾಷ್ಟ್ರಮಟ್ಟಕ್ಕೆ ಕೇಳಿಸಿದೆ. ನದಿ ತೀರದಲ್ಲಿ ನಾಗರಿಕತೆ ಬೆಳೆದು ಬಂದಿದ್ದು ಅಭಿವೃದ್ಧಿಯ ನಾಗಲೊಟದಲ್ಲಿ ಇದೀಗ ನದಿ ಪರಿಸರ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ರಕೃತಿಯ ಆರಾಧನೆ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ ಎಂದು ಅವರು ಹೇಳಿದರು. ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಸ್ವಚ್ಛ ಕಾವೇರಿ ಕಾಣಲು ಸಾಧ್ಯ ಎಂದರು. ಅರ್ಚಕರಾದ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ಅಷ್ಟೋತ್ತರ ನಂತರ ಚಂಡೆ, ಮಂಗಳವಾದ್ಯಗಳ ನಡುವೆ ಕಾವೇರಿ ನದಿಗೆ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಡಿ ಆರ್ ಸೋಮಶೇಖರ್, ಚಂದ್ರು, ಶ್ರೀನಿವಾಸ್, ಶಂಕರ್ ವೇಣುಗೋಪಾಲ್, ಚೈತನ್ಯ, ಧರಣಿ ಸೋಮಯ್ಯ ಬಳಗದ ಸದಸ್ಯರು ಮತ್ತು ಅಯ್ಯಪ್ಪ ಸ್ವಾಮಿ ವ್ರತದಾರಿಗಳು ಇದ್ದರು.