ಮಡಿಕೇರಿ NEWS DESK ಡಿ.28 : ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಹಬ್ಬಾಚರಣೆಯ ಸಂದರ್ಭ ಕುಪ್ಯ-ಚೇಲೆತೊಟ್ಟು ದೇವಸ್ಥಾನಕ್ಕೆ ತೆರಳಿದ್ದ ಕೊಡವರನ್ನು ಕುಪ್ಯ-ಚೇಲೆತೊಟ್ಟುಕೊಂಡು ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ, ಬರುವುದಾದರೆ ಕುಪ್ಯ-ಚೇಲೆ ಬಿಚ್ಚಿಟ್ಟು ಪಂಚೆ-ಶಲ್ಯವನ್ನು ತೊಟ್ಟು ಬರಬಹುದೆಂದು ತಾಕೀತು ಮಾಡಿರುವುದಲ್ಲದೆ ಹಲ್ಲೆ ನಡೆಸಿ ಹೊರಗಟ್ಟಲು ಯತ್ನಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ. ಬಹುಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಕೊಡವರ ಸುಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಈ ರೀತಿಯ ಮನಸ್ಥಿತಿಯ ವ್ಯಕ್ತಿಗಳು ಕಳಂಕ ತರುತ್ತಿದ್ದಾರೆ. ದೇಶದೆಲ್ಲೆಡೆ ಹಾಗೂ ಪ್ರಪಂಚದಾದ್ಯಂತ ಗಮನ ಸೆಳೆದಿರುವ ಕೊಡವ ಸೀರೆ, ಕುಪ್ಯ-ಚೇಲೆ, ಪೀಚೆಕತ್ತಿಯನ್ನು ದೇವಸ್ಥಾನಕ್ಕೆ ಧರಿಸಿಕೊಂಡು ಬರಕೂಡದೆಂಬ ಫತ್ವಾ ಹೊರಡಿಸಿದ ವ್ಯಕ್ತಿಗಳು ಸಮಾಜದಲ್ಲಿ ಶಾಂತಿ ಕಾಪಾಡಲು ಸಾಧ್ಯವಿಲ್ಲ. ಈ ರೀತಿಯ ವ್ಯಕ್ತಿಗಳು ಯಾವುದೇ ರಾಜಕೀಯ ಪಕ್ಷದಲ್ಲಾಗಲಿ ಅಥವಾ ಸಂಘ-ಸಂಸ್ಥೆಗಳಲ್ಲಾಗಲಿ ನಾಯಕರಾಗಿರಲು ಸಮರ್ಥರಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯಕ್ತಿಗಳು ತಮ್ಮ ಹುದ್ದೆಗೆ ಸ್ವತಃ ರಾಜೀನಾಮೆ ನೀಡುವುದು ಲೇಸು. ಯಾವುದೇ ವರ್ಗ, ಪಂಗಡ, ಸಮುದಾಯಗಳಿರಲಿ ದೇವನೆಲೆಗಳಿಗೆ ಹೋಗುವಾಗ ಅವರವರ ಸಾಂಪ್ರದಾಯಿಕ ಉಡುಗೆ ತೊಟ್ಟು ಹೋಗುವುದರಲ್ಲಿ ಯಾವುದೇ ಅಡ್ಡಿ-ಆತಂಕಗಳಿಗೆ ಅವಕಾಶವಿಲ್ಲ. ಕೆಲವೊಂದು ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಇದ್ದರೂ ಸಾಂಪ್ರದಾಯಿಕ ಉಡುಗೆಗಳಿಗೆ ಎಲ್ಲಿಯೂ, ಯಾರೊಬ್ಬರೂ ಚಕಾರವೆತ್ತುವಂತಿಲ್ಲ, ತಡೆವೊಡ್ಡುವಂತಿಲ್ಲ. ಸ್ವಂತಕ್ಕೆ ಮಾಡಿಕೊಂಡಿರುವ ಬೈಲಾಗಳಿದ್ದಲ್ಲಿ ಅಂತಹವುಗಳನ್ನು ತ್ವರಿತವಾಗಿ ತಿದ್ದುಪಡಿ ಮಾಡಿಕೊಳ್ಳುವುದು ಸೂಕ್ತ ಎಂದು ಒತ್ತಾಯಿಸಿದ್ದಾರೆ.