ಮಡಿಕೇರಿ ಜ.24 NEWS DESK : ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಮೂಲ ಸೌಕರ್ಯಗಳ ಕುರಿತು ಸಭೆ ನಡೆಯಿತು. ಕಾವೇರಿ ಭವನದಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಮಸೀದಿ ದುರಸ್ತಿ, ರಸ್ತೆಗಳು, ವಿದ್ಯಾರ್ಥಿ ವೇತನ, ಮೂಲಭೂತ ಸೌಕರ್ಯಗಳು, ಹೆಚ್ಚುವರಿಯಾಗಿ ಮನೆಗಳನ್ನು ಮಂಜೂರು ಮಾಡಲು ಶಾಸಕರು ಹಾಗೂ ಮುಖಂಡರು ಮನವಿ ಸಲ್ಲಿಸಿದರು. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ ವಿರಾಜಪೇಟೆ ಕ್ಷೇತ್ರದ ಅಲ್ಪಸಂಖ್ಯಾತರ ಮೂಲಭೂತ ಸೌಕರ್ಯಕ್ಕೆ ರೂ.3.5 ಕೋಟಿ ಅನುದಾನ ನೀಡಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಅಡಿ ಹಾಗೂ ಬಸವ ವಸತಿ ಯೋಜನೆ ಅಡಿ 1200 ಮನೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಶಾಸಕರ ಮನವಿ ಮೇರೆಗೆ ರೂ.4 ಕೋಟಿ ಹೆಚ್ಚುವರಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡುವ ಬಗ್ಗೆ ಭರವಸೆ ನೀಡಿದರು. ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿ ಮತ್ತು ಬಸವ ವಸತಿ ಯೋಜನೆ ಅಡಿ ಹೆಚ್ಚುವರಿಯಾಗಿ 1,000 ಮನೆಗಳನ್ನು ನೀಡುವ ಭರವಸೆ ನೀಡಿದರು.