







ಮಡಿಕೇರಿ ಏ.15 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಭಾರತದ ಸಂವಿಧಾನದ ಶಿಲ್ಪಿ, ಸಮಾಜ ಪರಿವರ್ತಕ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ, ವಿದ್ಯಾರ್ಥಿಗಳಿಗೆ ಡಾ.ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸುವ ಮಹತ್ವವನ್ನು ವಿಸ್ತಾರವಾಗಿ ವಿವರಿಸಿದರು. ಸಮಾಜ ಪರಿವರ್ತನೆಯ ಆವಶ್ಯಕತೆ, ಸಮಾನತೆಗೆ ಸಂಬಂಧಿಸಿದ ಪ್ರಬಲ ವಿಚಾರಗಳು ಹಾಗೂ ಅಂಬೇಡ್ಕರ್ ಅವರ ಮಹತ್ವದ ಕೊಡುಗೆ ಕುರಿತಂತೆ ಚರ್ಚಿಸಿದರು. ವಿದ್ಯಾರ್ಥಿಗಳ ಪ್ರಜ್ಞಾವಂತ ಭಾಷಣದಿಂದ ಕಾರ್ಯಕ್ರಮ ಸಾರ್ಥಕ ಹೊಂದಿದೆ, ಇದಕ್ಕೆ ಭಾರತರತ್ನ ಅಂಬೇಡ್ಕರ್ ಅವರೇ ಸ್ಫೂರ್ತಿ ಎಂದರು. ಅಂಬೇಡ್ಕರ್ ಅವರ ಗುರಿಮುಟ್ಟುವ ಇಚ್ಚಾಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು. ಕೊಡುಗೆ ನೀಡಿದ ಸಂವಿಧಾನದ ಆಶಯದಂತೆ ಸಮುದಾಯದ ಬೆಳವಣಿಗೆಗೆ ಮಹಿಳೆಯರೂ ಸೇರಿದಂತೆ ಎಲ್ಲರೂ ಅಭಿವೃದ್ಧಿ ಹೊಂದಬೇಕೆಂದರು. 2ನೇ ಬಿ.ಕಾಂ ವಿದ್ಯಾರ್ಥಿನಿ ಹೆಚ್.ಎನ್.ಶ್ರುತಿ ಮಾತನಾಡಿ, ಭಾರತ ರತ್ನ ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಕುರಿತ ತತ್ವಗಳನ್ನು ವಿವರಿಸಿದರು.
ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಅವರ ಪ್ರಗತಿಪರ ಚಿಂತನೆಗಳ ಕುರಿತು ವಿವರಿಸಿದರು. ಸಮಾಜ ಪರಿವರ್ತನೆಯ ಸಾಮಥ್ರ್ಯವನ್ನು ತೋರಿಸಿತು. ಯಾರೊಬ್ಬರ ಪ್ರತಿಭೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಸಂವಿಧಾನದ ಲಾಭ ಎಲ್ಲರಿಗೂ, ಮುಂದುವರೆದ ಎಲ್ಲರೂ ತಮ್ಮ ತಮ್ಮ ಜನಾಂಗದಲ್ಲಿ ಹಿಂದುಳಿದವರನ್ನು ಮೇಲೆ ತರಬೇಕೆಂಬುದು ವಿಶ್ವರತ್ನ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು. ಗಣಿತ ವಿಭಾಗದ ಮುಖ್ಯಸ್ಥ ಡಾ. ಆರ್.ರಾಜೇಂದ್ರ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣದ ರಾಯಭಾರಿ ಅವರ ಬರಹಗಳು ಮತ್ತು ಪುಸ್ತಕಗಳನ್ನು ಓದುವುದರ ಮೂಲಕ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗಣಕ ಶಾಸ್ತ್ರವಿಭಾಗದ ಮುಖ್ಯಸ್ಥ ಪ್ರೊ. ಎಂ.ಎನ್.ರವಿಶಂಕರ್ ಮಾತನಾಡಿ, ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶಿಕ್ಷಣವೇ ಅಸ್ತ್ರ ಎಂಬುದನ್ನು ಅಂಬೇಡ್ಕರ್ ಅವರು ನಿರೂಪಿಸಿದ್ದಾರೆ ಎಂದು ಹೇಳಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ವಿ.ಮಹೇಂದ್ರ ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆಯಂತಹ ಸಾಮಾಜಿ ಕಪಿಡುಗುಗಳು ಇನ್ನೂ ಜೀವಂತವಾಗಿವೆ. ಅವುಗಳನ್ನು ತೊಡೆದು ಹಾಕಲು ಸಂವಿಧಾನದ ಮೂಲ ಆಶಯವನ್ನು ಸಾಕಾರಗೊಳಿಸಲು ನಾವು ಬದಾಲಾಗಿ ಎಲ್ಲರನ್ನೂ ಬದಲಾಯಿಸಬೇಕೆಂದು ಅಭಿಪ್ರಾಯಪಟ್ಟರು. ಎನ್‍ಎಸ್‍ಎಸ್ ನಾಯಕ ಮನೋಜ್ ಮಾತನಾಡಿ, ಜೀತ ಪದ್ಧತಿ ಮತ್ತು ಶೋಷಣೆ ಇನ್ನೂ ಸಮಾಜದಲ್ಲಿ ಇದೆ, ಇದನ್ನು ತೊಡೆದು ಹಾಕಬೇಕಿದೆ. ಭಾರತರತ್ನ ಅಂಬೇಡ್ಕರ್ ಅವರು ಎಲ್ಲಾ ಜನಾಂಗಗಳಿಗೆ ಉಪಯೋಗವಾಗಿರುವ ಕಾರ್ಯಮಾಡಿದ ಮಹಾನಾಯಕರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿ ಪ್ರಮಾಣ ವಚನ ಸ್ವೀಕರಿಸಲಾಯಿತು. ಎನ್‍ಸಿಸಿನಾಯಕ ಮೋನಿಶ್ ಮತ್ತು ಗಣಶೇಖರ್, ಹಿಂದಿ ಉಪನ್ಯಾಸಕಿ ಕುರ್ಶಿದ್‍ಬಾನು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಎಸ್.ಎಂ.ನಿಶ್ಮಿತ ಮತ್ತು ಎಸ್.ಪಿ.ಕವನ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಟಿ.ವಿ.ವರ್ಷಾ ನಿರೂಪಿಸಿದರು, ಎಂ.ಕೆ.ಅಮೃತಾ ಸ್ವಾಗತಿಸಿದರು. ಕೌಶಲ್ಯ ರೈ ವಂದಿಸಿದರು.