ನಾಪೋಕ್ಲು ಜೂ.25 NEWS DESK : ಪೇರೂರು ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿಯಿಂದ ರೈತರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ್ದು, ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಕಾಡಾನೆಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಲ್ಲಮ್ಮವಟ್ಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ನಿವಾಸಿ ಮಣವಟ್ಟೀರ ದಯ ಚಿಣ್ಣಪ್ಪ ಅವರ ತೋಟಗಳಲ್ಲಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ. ಅಲ್ಲದೆ ಕೃಷಿ ಪರಿಕರ ಮತ್ತು ಫಸಲುಗಳಿಗೆ ಹಾನಿ ಉಂಟು ಮಾಡಿದೆ. ಪಂದೇಟು ಕಾಲೋನಿ ಸೇರಿದಂತೆ ಗ್ರಾಮದ ಹಲವೆಡೆ ನಾಲ್ಕಾರು ಕಾಡಾನೆಗಳು ಅಡ್ಡಾಡುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಆತಂಕ ಎದುರಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಸೇರಿದಂತೆ ಇನ್ನಿತರ ತೋಟದಲ್ಲೂ ಕೃಷಿ ಗಿಡಗಳನ್ನು ಕಾಡಾನೆಗಳು ಹಾಳುಗೆಡವಿದೆ. ಗ್ರಾಮದಲ್ಲಿ ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಇಲಾಖೆ ಮುಂದಾಗಬೇಕು ಹಾಗೂ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.











