ಮಡಿಕೇರಿ NEWS DESK ಸೆ.22 : ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಟಿಕೊಪ್ಪ ಪಟ್ಟಣದ ಫ್ಯಾಷನ್ ಜ್ಯುವೆಲ್ಲರಿಯಲ್ಲಿ ಇತ್ತೀಚೆಗೆ ನಡೆದಿದ್ದ ಚಿನ್ನದ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಅಲ್ಪನಾ (37), ಬಬಿತಾ (47) ಹಾಗೂ ಪೂಜಾ (29) ಬಂಧಿತ ಆರೋಪಿಗಳಾಗಿದ್ದು, ಇವರ ಬಳಿಯಿಂದ 22.180 ಗ್ರಾಂ ತೂಕದ 2 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಸೆ.14 ರಂದು ಅಪರಿಚಿತ ಮೂವರು ಮಹಿಳೆಯರು ಚಿನ್ನಾಭರಣ ಖರೀದಿಯ ನೆಪದಲ್ಲಿ ಸುಂಟಿಕೊಪ್ಪದ ಫ್ಯಾಷನ್ ಜ್ಯುವೆಲ್ಲರಿಗೆ ಬಂದಿದ್ದರು. ಯಾರ ಗಮನಕ್ಕೂ ಬಾರದ ಹಾಗೆ ಅಂದಾಜು 22 ಗ್ರಾಂ ತೂಕದ 2 ಚಿನ್ನದ ಸರವನ್ನು ಕಳವು ಮಾಡಿರುವ ಕುರಿತು ಅಂಗಡಿ ಮಾಲೀಕರು ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಚಂದ್ರಶೇಖರ್.ಪಿ, ಕುಶಾಲನಗರ ವೃತ್ತದ ಸಿಪಿಐ ದಿನೇಶ್ ಕುಮಾರ್, ಪಿಎಸ್‌ಐ ಮೋಹನ್ ರಾಜು.ಪಿ, ಸುಂಟಿಕೊಪ್ಪ ಠಾಣೆಯ ಪಿಎಸ್‌ಐ ಭಾರತಿ ಕೆ.ಹೆಚ್ ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡ ಆರೋಪಿಗಳನ್ನು ಪ್ರಕರಣ ನಡೆದ ಏಳು ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಮತ್ತು ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಎಸ್‌ಪಿ ಮನವಿ ಮಾಡಿದ್ದಾರೆ.











