ಮಡಿಕೇರಿ ಅ.18 NEWS DESK : ಕುಂಜಿಲಾ -ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡು ಗ್ರಾಮದ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿರುವ 42ನೇ ವರ್ಷದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ವರ್ಷದಲ್ಲಿ ಒಂದು ಬಾರಿ ಎಲ್ಲಾ ಗ್ರಾಮಸ್ಥರು ಒಂದೆಡೆ ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಗ್ರಾಮದಲ್ಲಿ ಒಗ್ಗಟ್ಟು ಹೆಚ್ಚುತ್ತದೆ ಎಂದರು. ಕ್ರೀಡೆಗೆ ಹೆಸರುವಾಸಿಯಾದ ನಮ್ಮ ಕೊಡಗು ಜಿಲ್ಲೆಯ ಇತಿಹಾಸಕ್ಕೆ ಮತ್ತೊಂದು ಬಲ ಬಂದಂತಾಗಿದೆ. ತಮ್ಮೆಲ್ಲ ಕೆಲಸದ ಒತ್ತಡಗಳನ್ನು ಬದಿಗಿಟ್ಟು, ಈ ದಿನ ಗ್ರಾಮಸ್ಥರು ಒಟ್ಟಾಗಿ ಆಟದಲ್ಲಿ ಭಾಗವಹಿಸಿರುವುದನ್ನು ನೋಡಲು ನಿಜವಾಗಿ ಸಂತೋಷ ಆಗುತ್ತಿದೆ ಎಂದು ಹೇಳಿದರು. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಇಂತಹ ಕ್ರೀಡಾಕೂಟಗಳು ಅತ್ಯಂತ ಮಹತ್ವ ಪಡೆಯುತ್ತದೆ ಎಂದರು. ಈ ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ತಮ್ಮ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು. ಈಗಾಗಲೇ ಈ ಭಾಗಕ್ಕೆ ತನಗೆ ಹಲವು ರಸ್ತೆಗಳ ಅಭಿವೃದ್ಧಿಗೆ ಬೇಡಿಕೆ ಬಂದಿದ್ದು, ಹಂತ ಹಂತವಾಗಿ ಎಲ್ಲವನ್ನೂ ಈಡೇರಿಸುವುದಾಗಿ ಭರವಸೆ ನೀಡಿದರು. ಕೆಲವು ರಸ್ತೆಗಳಿಗೆ ಸ್ಥಳದಲ್ಲೇ ಅನುದಾನವನ್ನು ಸಹ ಒದಗಿಸಿದರು. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಬಿಜೆಪಿಯವರು, ಹತಾಶೆಯಿಂದ ಇಲ್ಲ ಸಲ್ಲದ ಅಪಪ್ರಚಾರ ಮಾಡುವುದರಲ್ಲಿ ತೊಡಗಿದ್ದಾರೆ. ಅಂತಹ ಸುಳ್ಳುಗಳಿಗೆ ಕೊಡಗಿನ ಪ್ರಜ್ಞಾವಂತ ಜನರು ಮೋಸ ಹೋಗುವುದಿಲ್ಲ ಎಂದು ಹೇಳಿದ ಶಾಸಕರು ನಾವೆಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿ ಕಡೆ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು. ಈ ಸಂದರ್ಭ ಕೆಡಿಪಿ ಸದಸ್ಯರಾದ ಬಾಚಮಾಂಡ ಲವ ಚಿಣ್ಣಪ್ಪ, ಕುಂಜಿಲಾ -ಕಕ್ಕಬೆ ಗ್ರಾಮ ಪಂಚಾಯಿತಿ ಸದಸ್ಯರು, ಹರೀಶ್ ಮೊಣ್ಣಪ್ಪ, ಲೀಲಾವತಿ, ಕಾರ್ಯದರ್ಶಿ ಮುಕಟೀರ ಅಜಿತ್, ರಾಲಿ ಗಣಪತಿ, ಶೈಲಾ ಸಾಬು ಕಾಳಪ್ಪ, ಕುಟ್ಟಪ್ಪ, ದೀಪಕ್, ಚಿದಾನಂದ, ಸ್ಥಳೀಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.











