ಮಡಿಕೇರಿ ಡಿ.15 NEWS DESK : ಕನ್ನಡ ಉಪ ಭಾಷೆಗಳಲ್ಲಿ ಒಂದಾದ ಅರೆಭಾಷೆಯನ್ನು ಎಲ್ಲೆಡೆ ಪಸರಿಸುವಂತಾಗಲು ಸಿನಿಮಾ, ನಾಟಕ ಹಾಗೂ ಕಿರುಚಿತ್ರಗಳ ನಿರ್ಮಾಣ ಕಾರ್ಯ ಹೆಚ್ಚಾಗಿ ಆಗಬೇಕು ಎಂದು ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಚೊಕ್ಕಾಡಿ ಎನ್.ಅಪ್ಪಯ್ಯ ಅವರು ಸಲಹೆ ಮಾಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಸಹಯೋಗದೊಂದಿಗೆ ಮೂರ್ನಾಡು ಗೌಡ ಸಮಾಜದಲ್ಲಿ ನಡೆದ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಬೆಳವಣಿಗೆಯಲ್ಲಿ ಸಮಾಜಗಳ ಪಾತ್ರ ಕುರಿತು ಅವರು ಮಾತನಾಡಿದರು. ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ ಸಿನಿಮಾ ನಾಟಕ, ಸಾಕ್ಷ್ಯಚಿತ್ರ, ಕಿರುಚಿತ್ರಗಳು, ಎಲ್ಲರನ್ನು ಗಮನಸೆಳೆಯುತ್ತವೆ. ಆದ್ದರಿಂದ ಸಾಮಾಜಿಕ ಮಾಧ್ಯಮವು ಪ್ರಬಲವಾಗಿದ್ದು, ಆ ನಿಟ್ಟಿನಲ್ಲಿ ಅರೆಭಾಷೆ ಬೆಳವಣಿಗೆಗೆ ಇವುಗಳ ನಿರ್ಮಾಣ ಕಾರ್ಯ ಅತ್ಯಗತ್ಯ ಎಂದು ಅಪ್ಪಯ್ಯ ಅವರು ಪ್ರತಿಪಾದಿಸಿದರು. ಅರೆಭಾಷೆಯಲ್ಲಿ ಪುಸ್ತಕಗಳನ್ನು ಹೆಚ್ಚಾಗಿ ಪ್ರಕಟಿಸುವಂತಾಗಬೇಕು. ಪುಸ್ತಕಗಳ ಪ್ರಕಟಣೆ ಒಂದು ಗ್ರಂಥವಾಗಿದ್ದು, ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕು ಎಂದು ಅಪ್ಪಯ್ಯ ಅವರು ತಿಳಿಸಿದರು. 2016 ರಿಂದ ಅರೆಭಾಷೆ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ರಾಷ್ಟ್ರದಲ್ಲಿ 800ಕ್ಕೂ ಹೆಚ್ಚು ಸಣ್ಣ ಸಣ್ಣ ಭಾಷೆಗಳಿದ್ದು, ಕನ್ನಡದಲ್ಲಿಯೂ ಸಹ ಹಲವು ಉಪ ಭಾಷೆಗಳಿವೆ. ಆ ನಿಟ್ಟಿನಲ್ಲಿ ಪ್ರಾಂತೀಯ ಭಾಷೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಸುಮಾರು 6 ಲಕ್ಷದಷ್ಟೂ ಅರೆಭಾಷಿಕರಿದ್ದು, ಐನ್‍ಮನೆ ಸಂಸ್ಕೃತಿಯನ್ನು ಒಳಗೊಂಡಿದೆ. ಅರೆಭಾಷೆ ಶಾಸ್ತ್ರ, ಸಂಪ್ರದಾಯ, ಸಂಸ್ಕೃತಿಗಳು ತನ್ನದೇ ಆದ ಶ್ರೀಮಂತಿಕೆ ಹೊಂದಿದೆ ಎಂದು ಅಪ್ಪಯ್ಯ ನುಡಿದರು. ಅರೆಭಾಷೆ ಬೆಳವಣಿಗೆಯಲ್ಲಿ ಎಲ್ಲರ ಪಾತ್ರ ಪ್ರಮುಖವಾಗಿದ್ದು, ಭಾಷೆ ಮತ್ತು ಸಮಾಜ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ತಿಳಿಸಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಅವರು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಹಿರಿಯರ ಕೊಡುಗೆ ಕುರಿತು ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಬೆಳವಣಿಗೆಯಲ್ಲಿ ಪಟ್ಟಡ ಪ್ರಭಾಕರ್, ಪುರುಷೋತ್ತಮ ಬಿಳಿಮಲೆ, ಹೊದ್ದೆಟ್ಟಿ ಭವಾನಿ ಶಂಕರ್, ಸೂದನ ಈರಪ್ಪ, ವಿಶ್ವನಾಥ ಬದಿಕಾನ, ಕೋಡಿ ಕುಶಾಲಪ್ಪ ಗೌಡ, ಮೋಹನ್ ಸೋನಾ, ಪಿ.ಜಿ.ಅಂಬೆಕಲ್ಲು, ಬೈತಡ್ಕ ಜಾನಕಿ ಬೆಳ್ಯಪ್ಪ, ಕುರುಂಜಿ ಗಂಗಾಧರ್, ಪೂಜಾರಿ ಮೊಣ್ಣಪ್ಪ, ಕೋರನ ಸರಸ್ವತಿ, ಜೋಯಪ್ಪ ಮಾಸ್ಟರ್, ಹೀಗೆ ಹಲವರು ಶ್ರಮಿಸಿದ್ದಾರೆ ಎಂದು ಅವರು ಹೇಳಿದರು. ಅರೆಭಾಷೆ ಸಂಸ್ಕøತಿ, ಸಂಪ್ರದಾಯಗಳು ವಿಶೇಷತೆಯನ್ನು ಹೊಂದಿದ್ದು, ಸೋಬಾನೆ ಪದಗಳು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ ಎಂದು ತಿಳಿಸಿದರು. ‘ಹಾಲೇರಿ ಅರಸರ ಕಾಲದಲ್ಲಿ ಅಖಂಡ ಕೊಡಗು ಪಿರಿಯಾಪಟ್ಟಣದಿಂದ ಬಿ.ಸಿ.ರಸ್ತೆ ವರೆಗೂ ವಿಸ್ತಾರವಾಗಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ ಎಂದು ಸೂರ್ತಲೆ ಸೋಮಣ್ಣ ಅವರು ಹೇಳಿದರು.’ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹಲವು ಸಾಹಿತ್ಯ, ಸಂಸ್ಕೃತಿ ಚಟುವಟಿಕೆ ಕೈಗೊಳ್ಳಲಾಗಿದೆ ಎಂದರು. ಅಕಾಡೆಮಿ ವತಿಯಿಂದ ನೂರಕ್ಕೂ ಹೆಚ್ಚು ಪುಸ್ತಕಗಳು, 11 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗಿದೆ. ಕಥೆ, ಕವನ, ನಾಟಕ, ಮತ್ತಿತರ ಪುಸ್ತಕಗಳನ್ನು ಹೊರತರಲಾಗಿದೆ ಎಂದರು. ಅಕಾಡೆಮಿ ವತಿಯಿಂದ ಬರಹಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. 1800 ಕ್ಕೂ ಹೆಚ್ಚು ಮಂದಿ ಹಿಂಗಾರ ತ್ರೈಮಾಸಿಕಕ್ಕೆ ಸದಸ್ಯತ್ವ ಹೊಂದಿದ್ದಾರೆ ಎಂದು ಸದಾನಂದ ಮಾವಜಿ ಅವರು ಮಾಹಿತಿ ನೀಡಿದರು. ಅಕಾಡೆಮಿ ವತಿಯಿಂದ ಗಡಿನಾಡ ಉತ್ಸವ, ಗೌರವ ಪ್ರಶಸ್ತಿ ಪ್ರದಾನ ಸಮಾರಂಭ, ಅರೆಭಾಷೆ ದಿನಾಚರಣೆ, ಐನ್‍ಮನೆ ಕಾರ್ಯಕ್ರಮ, ಜೊತೆಗೆ ಕಿರುಚಿತ್ರ ಹಾಗೂ ನಾಟಕ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು. ಮೂರ್ನಾಡು ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ಚೆಟ್ಟಿಮಾಡ ಟಿ.ಕಾರ್ಯಪ್ಪ(ವಸಂತ) ಅವರು ಮಾತನಾಡಿ ಅರೆಭಾಷೆ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವಂತಾಗಬೇಕು. ಮನೆಯಲ್ಲಿ ಕಡ್ಡಾಯವಾಗಿ ಅರೆಭಾಷೆ ಮಾತನಾಡುವಂತಾಗಬೇಕು. ಇದರಿಂದ ಮಕ್ಕಳು ಅರೆಭಾಷೆ ಕಲಿಕೆಗೆ ಸಹಕಾರಿಯಾಗಲಿದೆ ಎಂದರು. ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು. ಭೂಮಿ ಮಾರಿಕೊಂಡಲ್ಲಿ ನಮ್ಮ ಸಂಸ್ಕೃತಿಯನ್ನು ಮರೆತಂತೆ ಎಂದು ಅವರು ಹೇಳಿದರು. ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರು ಮಾತನಾಡಿ, ಮಡಿಕೇರಿ ನಗರದಲ್ಲಿ ಕೊಡಗು ಗೌಡ ವಿದ್ಯಾಸಂಘ ನೂತನ ಕಟ್ಟಡವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಅಕಾಡೆಮಿ ಸದಸ್ಯರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಸಂದೀಪ್ ಪೂಳಕಂಡ ಅವರು ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ವತಿಯಿಂದ ಶ್ರಮಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಚಿಣ್ಣರ ಮೇಳ, ಅಜ್ಜಿಯ ಕಥೆ ಮತ್ತಿತರ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ ಎಂದರು. ಅಕಾಡೆಮಿ ಸದಸ್ಯರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಸೂದನ ಈರಪ್ಪ ಅವರು ಮಾತನಾಡಿ, ಅಕಾಡೆಮಿ ವತಿಯಿಂದ ‘ಅರೆಭಾಷೆ ರಸಪ್ರಶ್ನೆ’ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಮೂರ್ನಾಡು ಗೌಡ ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಟಿ.ಹರೀಶ್ ಅವರು ಮಾತನಾಡಿದರು. ಆಕಾಶವಾಣಿಯಲ್ಲಿ ಅರೆಭಾಷೆ ‘ಸುದ್ದಿಜೊಂಪೆ’ ವಾಚಕರಾದ ರೋಹಿಣಿ ಗುಡ್ಡೆಮನೆ, ವಾಣಿ ಚೊಕ್ಕಾಡಿ, ಮಜ್ಜೆಗೌಡನ ಪ್ರೇಮ ಪ್ರಕಾಶ್, ಉಳುವಾರನ ರೋಷನ್ ವಸಂತ್, ಪುದಿಯನೆರವನ ಸ್ವಾತಿ, ಕಲ್ಲುಮುಟ್ಲು ಜಶ್ಮಿ ಚಿಂತು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕು.ಮೇರ್ಕಜೆ ದಿವಿನ್ ಬೋಪಯ್ಯ ಮತ್ತು ಕು.ದೇರಾಜೆ ಭವಿಷ್ಯ ಕಿರಣ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಯಸ್ಕರು ಮತ್ತು ಮಕ್ಕಳಿಗೆ ಪ್ರತ್ಯೇಕ ಅರೆಭಾಷೆ ರಸಪ್ರಶ್ನೆ ನಡೆಸಿ, ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ರಸಪ್ರಶ್ನೆ ಸ್ಪರ್ಧೆಯನ್ನು ಸದಸ್ಯರಾದ ಪಿ.ಎಸ್.ಕಾರ್ಯಪ್ಪ ಮತ್ತು ಕುಂಬುಗೌಡನ ರಂಜಿತ್ ಅವರು ನಡೆಸಿಕೊಟ್ಟರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ತೆಕ್ಕಡೆ ಪೂರ್ಣಿಮಾ ಪ್ರಾರ್ಥಿಸಿದರು. ಸೂದನ ಈರಪ್ಪ ಸ್ವಾಗತಿಸಿದರು, ಕಲ್ಲುಮುಟ್ಲು ಜಶ್ಮಿ ನಿರೂಪಿಸಿದರು, ಲತಾ ಪ್ರಸಾದ್ ಕುದ್ಪಾಜೆ ವಂದಿಸಿದರು.











