ಮಡಿಕೇರಿ ಡಿ.15 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಚೆಟ್ಟಳ್ಳಿ ಚೇರಳ ಗೌಡ ಸಮಾಜದ ಸಹಯೋಗದಲ್ಲಿ ಅರೆಭಾಷೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಚೇರಳ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ನಿಡ್ಯಮಲೆ ಜ್ಞಾನೇಶ್ ಅವರು, ಅರೆಭಾಷೆ ಬೆಳೆದು ಬಂದ ದಾರಿ, ಅರೆಭಾಷೆ ಗೌಡರು ಮದುವೆಯ ಶಾಸ್ತ್ರ ಸಂಪ್ರದಾಯಗಳು ಹಾಗೂ ಹುಟ್ಟು-ಸಾವುಗಳಲ್ಲಿ ಮಾಡುವ ಶಾಸ್ತ್ರಗಳ ಬಗ್ಗೆ ವಿವರಿಸಿದರು. ಯುವ ಪೀಳಿಗೆ ನಮ್ಮ ಆಚಾರ ವಿಚಾರಗಳನ್ನು ಮರೆಯದೆ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಕರ್ನಾಟಕ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಹಿರಿಯರು ಹಾಗೂ ಕಾಫಿ ಬೆಳೆಗಾರರಾದ ಮರದಾಳು ಬಸಪ್ಪ ಮತ್ತು ಪೇರಿಯನ ಕುಶಾಲಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾಜದ ಕಾರ್ಯದರ್ಶಿ ಆಜೀರ ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ವಿಶೇಷ ಸಲಹೆಗಾರರಾದ ಮೇಚನ ವಾಸು ಉಪಸ್ಥಿತರಿದ್ದರು. ಖಜಾಂಚಿ ಮುಕ್ಕಾಟಿ ಪಳಂಗಪ್ಪ ಸ್ವಾಗತಿಸಿದರು. ಮರದಾಳು ಜಾನಕ್ಕಿ ಜೋಯಪ್ಪ ಮತ್ತು ಪೇರಿಯನ ನಂದಿನಿ ಉದಯ ಕುಮಾರ್ ಪ್ರಾರ್ಥಿಸಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಹಾಗೂ ಚೇರಳ ಗೌಡ ಸಮಾಜದ ಜಂಟಿ ಖಜಾಂಚಿ ಪೇರಿಯನ ಉದಯ ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.












