ಮಡಿಕೇರಿ ಡಿ.16 NEWS DESK : ಕರ್ನಾಟಕ ಅರೆಭಾಷೆ ಅಕಾಡೆಮಿ, ಭಾಗಮಂಡಲ ನಾಡು ಗೌಡ ಸಮಾಜ ಮತ್ತು ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಅರೆಭಾಷೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾಗಮಂಡಲ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಪ್ರಾಂಶುಪಾಲರಾದ ಕುಂದಲ್ಪಾಡಿ ದಿವಾಕರ್, ಅರೆಭಾಷೆ ಅಕಾಡೆಮಿ, ಕೊಡಗು ಗೌಡ ಫೆಡರೇಶನ್, ಗೌಡ ಸಮಾಜಗಳು ಮತ್ತು ಗೌಡ ಯುವ ಒಕ್ಕೂಟಗಳ ವಿವಿಧ ಕಾರ್ಯಕ್ರಮಗಳ ಫಲವಾಗಿ ಇಂದು ಅರೆಭಾಷೆ ಹೆಚ್ಚು ಬಳಕೆಯಾಗಿ ಜನಪ್ರಿಯವಾಗಿದೆ. ಎಲ್ಲರೂ ಹೆಮ್ಮೆಯಿಂದ ಅರೆಭಾಷೆಯನ್ನು ಗಟ್ಟಿಧ್ವನಿಯಲ್ಲಿ ಮಾತನಾಡುತ್ತಾರೆ. ಮಕ್ಕಳಿಗೆಗೊತ್ತಿರುವ ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸಿ ಬದುಕಿನ ದಾರಿ ಕಲಿಸಬೇಕು ಎಂದು ಹೇಳಿದರು. ಬುದ್ಧಿಶಕ್ತಿ ಬೆಳವಣಿಗೆಗೆ ಅವರ ಮಾತೃಭಾಷೆ ಹೆಚ್ಚು ಪ್ರಯೋಜನ. ನಗರಗಳಲ್ಲಿ ಓದುವ ಅನಿವಾರ್ಯತೆ ಇಲ್ಲ, ಮಕ್ಕಳಿಗೆ ಮನೆಗಳಲ್ಲಿ ಮಾತೃಭಾಷೆಯಲ್ಲಿ ಸಾಕಷ್ಟು ವಿಷಯ ಕಲಿಸಬಹುದು, ಎಲ್ಲರೂ ನಮ್ಮ ಆಚಾರ ವಿಚಾರ ಸಂಪ್ರದಾಯಗಳನ್ನು ಬೆಳೆಸಲು ಒಂದಾಗುವ ಎಂದು ಕರೆ ನೀಡಿದರು. ಗೌಡ ಸಮಾಜ ಗೌರವಾಧ್ಯಕ್ಷ ಕುದುಪಜೆ ಪಳಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರೆಭಾಷೆ ಅಕಾಡೆಮಿ ಸದಸ್ಯ ಕುದುಪಜೆ ಪ್ರಕಾಶ್, ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕ ದೇವಂಗೋಡಿ ಹರ್ಷ, ಸಮಾಜದ ಕಾರ್ಯದರ್ಶಿ ನಿಡ್ಯಮಲೆ ರವಿ, ಫೆಡರೇಶನ್ ನಿರ್ದೇಶಕ ಕುಯ್ಯಮುಡಿ ರಂಜು, ಭಾಗಮಂಡಲ ನಾಡಿನ ಅರೆ ಭಾಷಿಕ ಬಂಧುಗಳು ಪಾಲ್ಗೊಂಡಿದ್ದರು. ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷರಾದ ಕುದುಕುಳಿ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.











