ನಾಪೋಕ್ಲು ಡಿ.16 NEWS DESK : ಅರೆಭಾಷೆ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಪ್ರಾಚೀನ ಕಾಲದಿಂದಲೂ ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ನಿವೃತ್ತ ಮೇಜರ್, ಡಾ.ಕುಶ್ವಂತ್ ಕೋಳಿಬೈಲು ಅವರು ಅಭಿಪ್ರಾಯ ಪಟ್ಟರು. ಮೈಸೂರಿನ ಕೊಡಗು ಗೌಡ ಸಮಾಜದ ಆಶ್ರಯದಲ್ಲಿ ನಡೆದ ಅರೆಭಾಷೆ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಸಮುದಾಯದ ಸಹಬಾಳ್ವೆಯಿಂದಾಗಿ ಪ್ರಾಚೀನ ಕಾಲದ ಎಲ್ಲಾ ಊರುಗಳ ದೇವಾಲಯಗಳಲ್ಲಿ ತಕ್ಕ ಮುಖ್ಯಸ್ಥರಾಗಿ ಅಧಿಕಾರ ಹೊಂದಿ ಅಂದಿನ ಕಾಲದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು. ಭಾರತದಿಂದ ಬ್ರಿಟಿಷರನ್ನು ಓಡಿಸಲು, 1837ರಲ್ಲೇ ಕೆದಂಬಾಡಿ ರಾಮೇಗೌಡ ಹಾಗೂ ಗುಡ್ಡೆಮನೆ ಅಪ್ಪಯ್ಯ ಗೌಡ ಎಲ್ಲಾ ಜನರನ್ನು ಸಂಘಟಿಸಿ ಹೋರಾಡಿರುವುದು ಅವರ ನಾಯಕತ್ವದ ಗುಣವನ್ನು ತೋರಿಸುತ್ತದೆ. ಇಂತಹ ಗುಣವನ್ನು ಹೊಂದಿದ ಸಮುದಾಯ ತನ್ನ ಇತಿಹಾಸವನ್ನು ಅರಿತುಕೊಂಡು ಮುನ್ನಡೆಯುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಭಾಗವಹಿಸಿದ್ದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪೆÇನ್ನಚ್ಚನ ಮೋಹನ ಮಾತನಾಡಿ, ಅರೆ ಭಾಷೆಯನ್ನು ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳಿಸದೆ ಬೇರೆಯವರಿಗೂ ಕಲಿಸಿದಾಗ ಭಾಷೆ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದರು. ಇದೇ ಸಂದರ್ಭ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಮೈಸೂರಿನ ಉದ್ಯಮಿ ಚೆರಿಯಮನೆ ನರೇಶ್ ಕುಮಾರ್ ಅವರು, ಪ್ರತಿಯೊಬ್ಬರು ಸಮಯದ ಪಾಲನೆಯೊಂದಿಗೆ ಚಟುವಟಿಕೆಯಲ್ಲಿ ತೊಡಗಬೇಕು, ಸ್ಥಳೀಯ ಪರಿಸರದೊಂದಿಗೆ ಮಿಳಿ ತವಾಗಿರುವ ಅರೆ ಭಾಷೆ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು. ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಅವರು ಮಾತನಾಡಿ, ಅರೆಭಾಷಿಕ ಸಮುದಾಯದ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ಈ ಸಾಲಿನಿಂದ ವಿದ್ಯಾರ್ಥಿವೇತನ ನೀಡುತ್ತಿದ್ದು, ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉದ್ಯಮಿ ಗುಡ್ಡೆಮನೆ ಸತೀಶ್ ಬಾಲಕೃಷ್ಣ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾನಡ್ಕ ಪದ್ಮಾಜಿ ದಂಪತಿಗಳು ಹಾಗೂ ಕುಯುಮುಡಿ ಅಶ್ವಿನಿ ಕುಮಾರ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿದ ಬಹುಮಾನಗಳನ್ನು ಗಣ್ಯರು ವಿತರಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೆಟಿ ನಂದ ಸ್ವಾಗತಿಸಿದರೆ, ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ನಡುಮನೆ ಚೆಂಗಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ಅರೆ ಭಾಷೆ ದಿನಾಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಅಲ್ಲದೆ ಮೈಸೂರಿನ ಕೊಡಗು ಗೌಡ ಯುವ ವೇದಿಕೆಯವರು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳಾದ ಕುದುಪಜೆ ಚಂದ್ರಶೇಖರ್, ನಡುವಟಿರ ಲಕ್ಷ್ಮಣ್, ಹೊಸೂರು ರಾಘವ, ಕುಂಟುಪುಣಿ ರಮೇಶ್, ಚಪ್ಪೇರ ಯಮುನಾ, ಕುಂಟುಪುಣಿ ಶೀಲ, ತೋಟಂಬೈಲು ಇಂದಿರಾ ಮೊದಲಾದವರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.











