ನಾಪೋಕ್ಲು ಡಿ.16 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಡಿಕೇರಿ ತಾಲ್ಲೂಕಿನ ಜ್ಞಾನವಿಕಾಸ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವು ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಂತಹ ವಿಚಾರ ಗೋಷ್ಠಿ ಕಾರ್ಯಕ್ರಮ ಅತ್ಯಗತ್ಯ ಎಂದು ಹೇಳಿದರು. ಜಿಲ್ಲಾ ನ್ಯಾಯಾಲಯದ ವಕೀಲರಾದ ಮೀನಾಕುಮಾರಿ ಮಾತನಾಡಿ, ನೊಂದ ಮಹಿಳೆಗೆ ಕಾನೂನಿನಲ್ಲಿ ಸಿಗುವ ನ್ಯಾಯದ ಬಗ್ಗೆ, ಬಾಲ್ಯ ವಿವಾಹದ ಬಗ್ಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಮೌಲ್ಯದ ಕುರಿತು ಮಹಿಳಾ ಸಹಾಯವಾಣಿಯ ಕುರಿತು ಮಾಹಿತಿ ನೀಡಿದರು. ಪ್ರಾಸ್ತವಿಕ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಡಿಕೇರಿ ತಾಲ್ಲೂಕಿನ ಯೋಜನಾಧಿಕಾರಿ ಪುರುಷೋತ್ತಮ್, ಯೋಜನೆಯ ಹಿನ್ನೆಲೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಇಂದು ಮಹಿಳೆಯು ಸರ್ವತೋಮುಖ ಬೆಳವಣಿಗೆ ಸಾಧಿಸಿ, ಒಂದು ಕುಟುಂಬ ನಿರ್ವಹಣೆ ಮಾಡಲು ಮಹಿಳೆ ಸಿದ್ದರಾಗಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಎಲ್ಲಾ ಕಾರ್ಯಕ್ರಮಕ್ಕೆ ತೊಡಗಿಸಿಕೊಳ್ಳುವುದರಿಂದ ಪ್ರತಿಯೊಬ್ಬ ಮಹಿಳೆ ತನ್ನ ಕಾಲ ಮೇಲೆ ನಿಂತು ಜೀವನವನ್ನು ಸಾಗಿಸುತ್ತಿದ್ದಾರೆ ಎಂದರು. ಇದೇ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಾಳೂರು ಉಷಾಕಾಶಿ ಮಹಿಳಾ ವಿಚಾರಗೋಷ್ಠಿಯಲ್ಲಿ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವಳ್ಳಿ ಮಹಿಳೆ ಮತ್ತು ಪೋಷಕರ ಪಾತ್ರದ ಬಗ್ಗೆ ಮಾತನಾಡಿ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಲ್ಲಿ ಹೇಗೆ ಪೋಕಷರು ಹೇಗೆ ಬೆಳೆಸಬೇಕು ಎಂದು ವಿವರಿಸಿದರು. ಅವಿಭಕ್ತ ಕುಟುಂಬದ ಜೀವನ ಶೈಲಿಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಜೀವನದಲ್ಲಿ ಜ್ಞಾನ ಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಎಂದರು. ಪದ್ಮಶ್ರೀ ರಾಣಿಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಣಿ ಪ್ರಾರ್ಥಿಸಿದರು, ಸೇವಾಪ್ರತಿನಿಧಿ ಚಿತ್ರ ಸ್ವಾಗತಿಸಿದರು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಾಲಿನಿ ನಿರೂಪಿಸಿದರು, ಯಶೋಧ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೂಗುಚ್ಛ, ರಂಗೋಲಿ, ಛದ್ಮವೇಷ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರದ ಸದಸ್ಯರಿಂದ ಸ್ವ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಳಿಗೆ ಹಾಕಲಾಗಿತ್ತು.
ವರದಿ : ದುಗ್ಗಳ ಸದಾನಂದ.











