ಮಾರುಕಟ್ಟೆ ಸ್ಥಳಾಂತರದ ಹಿಂದೆ ಭೂಕಬಳಿಕೆದಾರರ ಸಂಚು : ಕುಶಾಲನಗರ ಸಂತೆ ವ್ಯಾಪಾರಿಗಳ ಆರೋಪ

23/10/2020

ಮಡಿಕೇರಿ ಅ.23 : ಕುಶಾಲನಗರ ಮಾರುಕಟ್ಟೆ ಸ್ಥಳಾಂತರದ ಹಿಂದೆ ಭೂಕಬಳಿಕೆದಾರರ ಸಂಚು ಅಡಗಿದೆ ಎಂದು ಸಂತೆ ವ್ಯಾಪಾರಿಗಳ ಸಂಘ ಗಂಭೀರ ಆರೋಪ ಮಾಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಚಾಲಕ ಎಂ.ಇ.ಮೊಹಿದ್ದೀನ್, ಸಂತೆಯನ್ನು ಈ ಹಿಂದಿನ ಪ್ರದೇಶದಿಂದ ಸ್ಥಳಾಂತರ ಮಾಡದಂತೆ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ನ್ಯಾಯಾಲಯವೂ ಆದೇಶವೊಂದನ್ನು ಮಾಡಿದ್ದು, ಇದನ್ನು ಜಿಲ್ಲಾಡಳಿತ ಪಾಲಿಸಬೇಕಾಗಿದೆ. ಇಲ್ಲದಿದ್ದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಕುಶಾಲನಗರದ ಸಂತೆಮಾಳದಲ್ಲಿ ಕಳೆದ 90 ವರ್ಷಗಳಿಂದ ಸಂತೆ ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನಗರದ ನಿವೇಶನಗಳ ಬೆಲೆ ಗಗನಕ್ಕೇರಿರುವುದರ ಬೆನ್ನ ಹಿಂದೆಯೇ ಸಂತೆಮಾಳದ ಜಾಗವನ್ನು ಕಬಳಿಸುವ ಉದ್ದೇಶದಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದರು.
ಆದರೆ ಎಪಿಎಂಸಿ ಆವರಣದಲ್ಲಿ ಸಗಟು ವ್ಯಾಪಾರ ವಹಿವಾಟಿಗೆ ಅವಕಾಶವಿದೆಯೇ ಹೊರತು ಬಿಡಿ ವ್ಯಾಪಾರ ವಹಿವಾಟಿಗೆ ನಿಯಮಾನುಸಾರ ಅವಕಾಶವಿಲ್ಲ. ನಿಗದಿಯಾದ ವಸ್ತುಗಳ ವ್ಯಾಪಾರ ವಹಿವಾಟಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಲಿಖಿತ ರೂಪದಲ್ಲೂ ಎಪಿಎಂಸಿ ತಿಳಿಸಿದೆ. ಇದರಿಂದ ವಿವಿಧೆಡೆಗಳಿಂದ ಬಂದು ಕುಶಾಲನಗರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಸಾವಿರಾರು ವರ್ತಕರು ಬೀದಿ ಪಾಲಾಗುವ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂತೆ ಮಾಳದಲ್ಲಿ 7.84 ಏಕರೆ ಜಾಗವಿದ್ದು, ಇದರಲ್ಲಿ 2.73 ಏಕರೆ ಪ್ರದೇಶವನ್ನು ವಿದ್ಯುತ್ ಇಲಾಖೆಗೆ ಬಿಟ್ಟು ಕೊಡಲಾಗಿದೆ. ಬಾಕಿ ಇರುವ 5.11 ಏಕರೆ ಪ್ರದೇಶದಲ್ಲಿ ಸಂತೆ ನಡೆಯುತಿತ್ತು, ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿ ಪಕ್ಕದ ಈ ಸಂತೆ ಮಾಳದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಈ ಹಿಂದಿನಿಂದಲೂ ಸಂತೆ ನಡೆದುಕೊಂಡು ಬರುತಿತ್ತು.
ಅಲ್ಲದೆ ಶ್ರೀಮಹಾಗಣಪತಿ ರಥೋತ್ಸವದ ವಸ್ತು ಪ್ರದರ್ಶನ, ದನಗಳ ಜಾತ್ರೆ ಮತ್ತು ಸಂತೆಯನ್ನು ಒಟ್ಟಾಗಿ ನಡೆಸಿಕೊಂಡು ಬರಲಾಗುತಿತ್ತು. ಸಂತೆಮಾಳದ ಜಾಗದಲ್ಲಿ ಯಾವುದೇ ರೀತಿಯ ಅಪಘಾತ, ಅವಘಡಗಳು, ಅಹಿತಕರ ಘಟನೆಗಳು ಸಂಭವಿಸದೆ ವ್ಯಾಪಾರ ವಹಿವಾಟುಗಳು ನಡೆಯುತ್ತಿತ್ತು ಎಂದು ತಿಳಿಸಿದರು.
ಈ ಸಂತೆಮಾಳವನ್ನು ಹೈಟೆಕ್ ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲು ಪಟ್ಟಣ ಪಂಚಾಯ್ತಿ ಈ ಮೊದಲು 3 ಕೋಟಿ ಹಾಗೂ ಇತ್ತೀಚೆಗೆ 2 ಕೋಟಿ ರೂ.ಗಳನ್ನು ವ್ಯಯಿಸಿದೆ. ಸಂತೆ ಸುಂಕ ಮತ್ತು ಮಳಿಗೆಗಳ ಹರಾಜಿನಿಂದ ಪಟ್ಟಣ ಪಂಚಾಯ್ತಿ 30 ಲಕ್ಷ ರೂ. ಆದಾಯವನ್ನು ಪಡೆದುಕೊಳ್ಳುತಿತ್ತು. ಸಂತೆಯನ್ನು ಸ್ಥಳಾಂತರ ಮಾಡುವ ಹಂತದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮತ್ತು ಜ್ಞಾಪನಾ ಪತ್ರಗಳನ್ನು ಸಲ್ಲಿಸಿ ಸ್ಥಳಾಂತರಿಸದಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಇ.ಮೊಹಮ್ಮದ್ ಶರೀಫ್ ಹಾಗೂ ಖಜಾಂಚಿ ವಿ.ಹೆಚ್.ಪ್ರಶಾಂತ್ ಉಪಸ್ಥಿತರಿದ್ದರು.