ಮೆಡಿಕಲ್ ಶಾಪ್ ನಲ್ಲಿ ನಶೆಯೇರಿಸುವ ಮಾತ್ರೆಗಳು : ಗೋಣಿಕೊಪ್ಪಲಿನಲ್ಲಿ ಇಬ್ಬರ ಬಂಧನ

23/10/2020

 ಮಡಿಕೇರಿ ಅ.23 :    ಕೊಡಗು ಜಿಲ್ಲೆಯಲ್ಲಿ ನಶೆಯೇರುವ ಮಾತ್ರೆಗಳನ್ನು ಮೆಡಿಕಲ್ ಶಾಪ್ ಮಾಲೀಕರ ಶಾಮೀಲಿನೊಂದಿಗೆ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು  ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ದಂದಿಗಳು ಯಶಸ್ವಿಯಾಗಿದ್ದಾರೆ.  ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ  ಗಾಂಜಾ , ಡ್ರಗ್ಸ್ ಮತ್ತಿತರ  ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳಾಗಿದ್ದ ಯುವಕರು  ನಶೆಯೆರುವ ಮಾತ್ರೆಗಳನ್ನು ಮೆಡಿಕಲ್ ಶಾಪ್ ಗಳಿಂದ ಖರೀದಿಸಿ ಬಳಕೆ ಮಾಡುತ್ತಿರುವುದಲ್ಲದೇ  ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆ ಕೊಡಗು ಜಿಲ್ಲೆ ಡಿಸಿಐಬಿ ಘಟಕದ ಪೊಲೀಸರು  ಮಾಹಿತಿ  ಮೇರೆ ದಿನಾಂಕ 23-10-2020 ರಂದು ಗೋಣಿಕೊಪ್ಪಲಿನ ಮೆಡಿಕಲ್ ಶಾಪ್ ವೊಂದರಿಂದ ನಶೆಯೆರುವ ಮಾತ್ರೆಗಳನ್ನು ಖರೀದಿಸಿ  ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು  ನಶೆಯೆರುವ ಮಾತ್ರೆಗಳ ಬಾಕ್ಸ್ ಸಮೇತ ಪತ್ತೆಹಚ್ಚಿರುತ್ತಾರೆ. ಇದರಿಂದ ಜಿಲ್ಲೆಯಲ್ಲಿರುವ ಕೆಲ ಮೆಡಿಕಲ್ ಶಾಪ್ ನ ಮಾಲೀಕರು ನಶೆಯೆರುವ ಮಾತ್ರೆಗಳನ್ನು ಗೌಪ್ಯವಾಗಿ ಮಾದಕ ವ್ಯಸನಿಗಳಾಗಿರುವ ಕೆಲ ಯುವಕರ ಮುಖಾಂತರ ಮಾರಾಟ ಮಾಡಿಸಿ ಲಾಭ ಪಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ. ವಶಕ್ಕೆ ಪಡೆದ ಯುವಕರಿಬ್ಬರನ್ನು ವಶಕ್ಕೆ ಪಡೆದುಕೊಂಡ ಮಾತ್ರೆಗಳೊಂದಿಗೆ ಜಿಲ್ಲಾ ಡ್ರಗ್ ಕಂಟ್ರೋಲರ್ ಅಧಿಕಾರಿಯವರ ಮುಂದೆ ಹಾಜರುಪಡಿಸಲಾಗಿದ್ದು ಯುವಕರಿಬ್ಬರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗಿರುತ್ತದೆ.ವಶಕ್ಕೆ ಪಡೆದ ಯುವಕರಿಬ್ಬರ ವಿವರ: 1. ಹೆಚ್.ಆರ್ ಸುಮನ್ ತಂದೆ ಲೇಟ್ ರಾಮು , ಟ್ಯಾಟು ಆರ್ಟ್ಸ್ ಕೆಲಸ, ವಾಸ: ಎಫ್ .ಎಂ.ಸಿ ರಸ್ತೆ ಜೂಸ್ ಫ್ಯಾಕ್ಟರಿ ಹತ್ತಿರ ಆರ್.ಟಿ.ಹೆಚ್ ಎದುರು ಗೋಣಿಕೊಪ್ಪ .2. ಜೀವನ್ ಹೆಚ್ .ಎಸ್ ತಂದೆ ಶ್ರೀನಿವಾಸ್ , ವಿದ್ಯಾರ್ಥಿ, ವಾಸ: ಈರಣ್ಣ ಕಾಲೋನಿ ಗೋಣಿಕೊಪ್ಪ. 
 ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯ , ಪಿಎಸ್ಐ  ಹೆಚ್.ವಿ ಚಂದ್ರಶೇಖರ್  ಸಿಬ್ಬಂದಿಗಳಾದ ಎಎಸ್ಐ ಹಮೀದ್, ಯೊಗೇಶ್ ಕುಮಾರ್, ನಿರಂಜನ್, ವಸಂತ, ಶರತ್ ರೈ, ವೆಂಕಟೇಶ್, ಸುರೇಶ್, ಅನಿಲ್ ಕುಮಾರ್ ಹಾಗೂ ಶಶಿಕುಮಾರ್  ರವರು ಭಾಗವಹಿಸಿದ್ದು, ಇವರ ಕಾರ್ಯವೈಖರಿಯನ್ನು  ಶ್ಲಾಘಿಸಲಾಗಿದೆ.   ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತು ನಿಯಂತ್ರಣಕ್ಕೆ ಬಂದ ಹಿನ್ನಲೆ ನಶೆಯೇರುವ ಮಾತ್ರೆಗಳ ಬಳಕೆಯತ್ತ ಯುವಕರು ಮುಂದಾಗಿರುವ ಬಗ್ಗೆ ಮಾಹಿತಿಗಳು ಬರುತ್ತಿರುವುದರಿಂದ ಮೆಡಿಕಲ್ ಶಾಪ್ ಗಳ ಮಾಲೀಕರು ನಿಗಾವಹಿಸುವಂತೆ ಕೋರಲಾಗಿದೆ. ಅಲ್ಲದೇ ಈ ಬಗ್ಗೆ ಪೋಷಕರು ಸಹಾ ತಮ್ಮ ಯುವ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾವಹಿಸಿ ಮಾದಕ ವ್ಯಸನಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.