ಹಸಿರು ನಿಶಾನೆ ತೋರಿದ ನ್ಯಾಯಾಲಯ : ಸೋಮವಾರಪೇಟೆ ಪ.ಪಂ ಚುನಾವಣೆಗಿಲ್ಲ ಅಡೆತಡೆ

ಸೋಮವಾರಪೇಟೆ ಅ.23 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಚುನಾವಣೆಗೆ ರಾಜ್ಯ ಉಚ್ಚ ನ್ಯಾಯಾಲಯ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಅಯ್ಕೆ ಪ್ರಕ್ರಿಯೆಗೆ ಬಿಜೆಪಿ ಚಾಲನೆ ನೀಡಿದೆ.
ಪಟ್ಟಣ ಪಂಚಾಯಿತಿಗೆ ಮೀಸಲಾತಿ ಸಮರ್ಪಕವಾಗಿಲ್ಲ. ಬಹುಮತ ಇರುವ ಪಕ್ಷವನ್ನು ಆಡಳಿತದಿಂದ ದೂರ ಇಡುವ ದೃಷ್ಟಿಯಿಂದ ಮೀಸಲಾತಿ ಮಾಡಲಾಗಿದೆ. ಮಾರ್ಗಸೂಚಿಯನ್ನು ಸಮರ್ಪಕವಾಗಿ ಪಾಲಿಸಿಲ್ಲ. ದುರುದ್ಧೇಶದಿಂದ ಮಾಡಲಾಗಿದೆ. ಆದುದರಿಂದ, ಈಗಿನ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯೆ ಜಯಂತಿ ಶಿವಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅ.20ರಂದು ನಡೆಯಬೇಕಿದ್ದ ಚುನಾವಣೆಗೆ ರಾಜ್ಯ ಉಚ್ಚ ನ್ಯಾಯಾಲಯ ಅ.19ರಂದು ತಡೆಯಾಜ್ಞೆ ನೀಡಿತ್ತು.
ಅ.22ರಂದು ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳು ತಡೆಯಾಜ್ಞೆ ಯನ್ನು ತೆರವುಗೊಳಿಸಿ, ಅ.8 ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿಯಂತೆ ನ.10ರ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಜಾದಿನಗಳೂ ಸೇರಿದಂತೆ ನ್ಯಾಯಾಲಯ ತಿಳಿಸಿದ ದಿನದೊಳಗೆ ಚುನಾವಣೆಯನ್ನು ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎ.ವಿಜಯಕುಮಾರ್ ತಹಸೀಲ್ದಾರ್‍ಗೆ ಆದೇಶ ನೀಡಿದ್ದಾರೆ.
ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತ ಬಂದಿದ್ದು, ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ 3 ಹಾಗು ಪಕ್ಷೇತರ ಒಬ್ಬರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ಹಾಗು ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮೀಸಲಾಗಿದ್ದು, ಬಹುಮತ ಪಡೆದ ಮೈತ್ರಿಯಲ್ಲಿ ಪರಿಶಿಷ್ಟಜಾತಿಗೆ ಸೇರಿದ ಸದಸ್ಯರು ಆಯ್ಕೆಯಾಗಿಲ್ಲದ ಕಾರಣ, ಬಿಜೆಪಿ ಸದಸ್ಯರಾದ ನಳಿನಿ ಗಣೇಶ್ ಅಥವಾ ಪಿ.ಕೆ.ಚಂದ್ರ ಅಧ್ಯಕ್ಷ ಸ್ಥಾನ ಪಡೆಯಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಿ.ಸಿ.ವೆಂಕಟೇಶ್, ಬಿ.ಸಂಜೀವ, ನಾಗರತ್ನ ಅಕಾಂಕ್ಷಿಗಳಾಗಿದ್ದಾರೆ.