ಚೆಟ್ಟಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟ : ಓರ್ವನ ಬಂಧನ : ಬಂಧಿತನಿಂದ ರೂ. 50 ಸಾವಿರ ಮೌಲ್ಯದ ಗಾಂಜಾ ವಶ

24/10/2020

ಮಡಿಕೇರಿ ಅ. 24 : ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾಲು ಸಮೇತ ಪತ್ತೆಹಚ್ಚುವಲ್ಲಿ ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಚೆಟ್ಟಳ್ಳಿ ಕಂಡಕೆರೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೈಸೂರಿನ ಪಿರಿಯಾಪಟ್ಟಣದ ಮುತ್ತೂರು ಕಾಲೋನಿ ನಿವಾಸಿ ವೆಂಕಟಾಚಲ ಎಂಬಾತನನ್ನು ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆಹಚ್ಚಿ 1 ಕೆ.ಜಿ ತೂಕದ ಸುಮಾರು 50 ಸಾವಿರ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ನಿರೀಕ್ಷಕ ಎನ್.ಕುಮಾರ್ ಆರಾಧ್ಯ, ಪಿಎಸ್‍ಐ ಹೆಚ್.ವಿ ಚಂದ್ರಶೇಖರ್, ಸಿಬ್ಬಂದಿಗಳಾದ ಎಎಸ್‍ಐ ಹಮೀದ್, ಯೊಗೇಶ್ ಕುಮಾರ್, ನಿರಂಜನ್, ವಸಂತ, ಶರತ್ ರೈ, ವೆಂಕಟೇಶ್, ಸುರೇಶ್, ಅನಿಲ್ ಕುಮಾರ್ ಹಾಗೂ ಶಶಿಕುಮಾರ್ ಭಾಗವಹಿಸಿದ್ದು,
ಇವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘೀಸಿ ನಗದು ಬಹುಮಾನವನ್ನು ಘೊಷಿಸಿದ್ದಾರೆ.