ಮೈಸೂರಿನ ಪ್ರಿನ್ಸ್ ಗಾಯತ್ರಿ ದೇವಿಯೊಂದಿಗೆ ಕೊಡಗಿನ ಗೌರಮ್ಮ

27/10/2020

ಚೆಟ್ಟಳ್ಳಿ: ಮೈಸೂರು ಇತಿಹಾಸದ ರಾಜವೈಭವವನ್ನು ನೆನಪಿಸುವ ನಾಡಹಬ್ಬ ದಸರಾದ ನಡುವೆ ರಾಜಕುಮಾರಿ ಗಾಯತ್ರಿದೇವಿಗೂ ಕೊಡಗಿನ ಬಿದ್ದಂಡ ಗೌರಮ್ಮ ಅವರ ನಡುವಿನ ಸ್ನೇಹತ್ವದ ನೆನಪು ಮತ್ತೆ ಮರುಕಳಿಸುತ್ತಿದೆ.
1964ರಲ್ಲಿ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ರಾಜಕುಮಾರಿ ಗಾಯತ್ರಿದೇವಿಯೊಂದಿಗೆ ಪೊನ್ನಂಪೇಟೆಯ ಸ್ವಾತಂತ್ರ್ಯ ಹೋರಾಟಗಾರ ಕೂಕಂಡ ನಂಜಪ್ಪ ಹಾಗೂ ಅಕ್ಕಮ್ಮ ದಂಪತಿಯರ ಹಿರಿಯಮಗಳು ದಿವಂಗತ ಬಿದ್ದಂಡ ಸುಬ್ಬಯ್ಯ ಅವರ ಧರ್ಮಪತ್ನಿ ಬಿದ್ದಂಡ ಗೌರಮ್ಮ ಮೈಸೂರಿನ ಮಾಹಾರಾಣಿ ಕಾಲೇಜಿನಲ್ಲಿ ಓದಿದ ನೆನಪನ್ನು ಹೇಳುತ್ತಾರೆ.
ಸರಳತೆಯ ಉಡುಪುತೊಟ್ಟು ಅರಮನೆಯ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಬಂದಿಳಿಯುತ್ತಿದ್ದು ಅವರೊಂದಿಗೆ ಸೇವಕಿ ಇರುತ್ತಿದ್ದರಂತೆ. ಮಧ್ಯಾಹ್ನದ ಊಟದ ಸಮಯದಲ್ಲಿ ನಿತ್ಯವೂ ಶೃಂಗರಿಸಿದ ಅರಮನೆಯ ಎತ್ತಿನಗಾಡಿಯಲ್ಲಿ ಊಟತಂದು ರಾಜಕುಮಾರಿ ಗಾಯತ್ರಿದೇವಿಗೆ ಉಣಬಡಿಸಿ ತೆರಳುತ್ತಿದ್ದು ಸಂಜೆಯಾಗುತ್ತಲೇ ಅರಮನೆಯ ವಾಹನದಲ್ಲಿ ಅರಮನೆಗೆ ಕರೆದೊಯ್ಯುತ್ತಿದ್ದರಂತೆ.
ಇತಿಹಾಸದ ತರಗತಿಯಲ್ಲಿ ಬಿದ್ದಂಡ ಗೌರಮ್ಮ ಅವರೊಂದಿಗೆ ಸ್ನೇಹ ಹೊಂದಿದ್ದರು. ಕಾಲೇಜಿನ ವಾರ್ಷಿಕೋತ್ಸವದಲ್ಲಿ ರಾಜಕುಮಾರಿ ಗಾಯತ್ರಿದೇವಿಯೊಂದಿಗೆ ತೆಗೆದ ಕಪ್ಪುಬಿಳುಪಿನ ಫೋಟೋ ಬಿದ್ದಂಡ ಗೌರಮ್ಮ ಅವರ ಆಲ್ಬಮಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ರಾಜಕುಮಾರಿಗೆ ಕೊಡವರ ಬಗ್ಗೆ ಅತೀವ ಪ್ರೀತಿ ಇದ್ದದರಿಂದ ನಿತ್ಯವೂ ಒಬ್ಬ ಕೊಡಗಿನ ಸ್ನೇಹಿತೆ ವೀಣಾ ಹಾಗೂ ಜೊತೆಗೆ ಗೌರಮ್ಮ ಸ್ನೇಹಿತರಾಗಿದ್ದರು. ಪ್ರಿನ್ಸ್ ಗಾಯತ್ರಿ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿರುವಾಗ ವಿವಾಹ ನಿಶ್ಚಯವಾಗಿತ್ತು. ಮೈಸೂರಿನ ಸ್ಟೇಟ್ ಎಂಪೋರಿಯಂನಲ್ಲಿ ವಿವಾಹಕ್ಕೆ ರಾಜಕುಮಾರಿಗೆ ಚಿನ್ನ ಜರಿಯಸೀರೆಯನ್ನು ತರಿಸಿದ್ದರಂತೆ. ಅದೇ ವರ್ಷ ಗೌರಮ್ಮನವರು ಪೊನ್ನಂಪೇಟೆಯ ಕೂಕಂಡ ಕುಟುಂಬದಿಂದ ಮೂರ್ನಾಡು ಬಿದ್ದಂಡ ಕುಟುಂಬದ ಸುಬ್ಬಯ್ಯನವರಿಗೆ ವಿವಾಹ ನಿಶ್ಚಯವಾದರಿಂದ ಮೈಸೂರಿನ ಸ್ಟೇಟ್ ಎಂಪೋರಿಯಂನಲ್ಲಿ ಮಹಾರಾಣಿಗೆ ತರಿಸಿದ ಚಿನ್ನದ ಜರಿಯಿರುವ ಒಂದು ಸೀರೆಯನ್ನು ಖರೀದಿಸಿದ ಬಗ್ಗೆ ಗೌರಮ್ಮ 56ವರ್ಷ ಹಿಂದಿನ ನೆನಪನ್ನು ಹೇಳುತ್ತಾರೆ.
ಆರುನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಮೈಸೂರು ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನರಾಗಿ ಅವರಿಗೆ ಮಕ್ಕಳಿಲ್ಲದರಿಂದ 15 ತಿಂಗಳ ಬಳಿಕ ಸಹೋದರಿ ರಾಜಕುಮಾರಿ ಗಾಯತ್ರಿದೇವಿ ಮೊಮ್ಮಗ ಬೆಟ್ಟದಕೋಟೆ ರಾಜವಂಶಸ್ಥರಾದ ಯುದುವೀರ್‍ನನ್ನು ಯದುವಂಶದ ಉತ್ತರಾಧಿಕಾರಿಯಾಗಿ 2015ರ ಫೆಬ್ರವರಿಯಂದು ದಸರಾಗೆ ಮುನ್ನ ಕುಟುಂಬದ ಸಂಪ್ರದಾಯಂದಂತೆ ಪಟ್ಟಾಭಿಷೇಕ ನಡೆಸಲಾಯಿತು.
ಯಧುವೀರ್ 27ನೇ ಉತ್ತರಾಧಿಕಾರಿಯಾಗಿ ದಸರಾದಂದು ಚಿನ್ನದ ಆಸನದಲ್ಲಿ ಕುಳಿತು ದಸರಾ ಸಂಪ್ರದಾಯವನ್ನು ನೆರವೇರಿಸುತ್ತಿದ್ದಾರೆ.
ಮೈಸೂರಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ನಿರ್ವಹಿಸಿ ನಿವೃತ್ತಿಹೊಂದಿ ಕೊಡಗಿನ ಮೂರ್ನಾಡಿನಲ್ಲಿ ತನ್ನ ನಿವೃತ್ತಿ ಜೀವನವನ್ನು ಸಂತೋಷದಿಂದ ಕಳೆಯುತ್ತಾ ರಾಜಕುಮಾರಿಯೊಂದಿಗೆ ಓದುತ್ತಿದ್ದ ನೆನಪನ್ನು ದಸರಾ ಸಮಯದಲ್ಲಿ ಮೆಲುಕು ಹಾಕಿದರು.