ಎಂಎಲ್‍ಸಿ ಸುನಿಲ್ ಸುಬ್ರಮಣಿ ಫೇಸ್‍ಬುಕ್ ಖಾತೆಗೆ ಆಕ್ಷೇಪಾರ್ಹ ಕಮೆಂಟ್ : ಸೈಬರ್ ಪೊಲೀಸರಿಗೆ ದೂರು

27/10/2020

ಮಡಿಕೇರಿ ಅ.27 : ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರ ಫೇಸ್‍ಬುಕ್ ಖಾತೆಗೆ ಅಪರಿಚಿತ ವ್ಯಕ್ತಿಗಳು ಆಕ್ಷೇಪಾರ್ಹ ಶಬ್ಧಗಳಿಂದ ಕಮೆಂಟ್ ಮಾಡಿರುವ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ಸುನಿಲ್ ಸುಬ್ರಮಣಿ ಅವರು ತಮ್ಮ ಹೆಸರಿನಲ್ಲಿ ಫೇಸ್‍ಬುಕ್ ಖಾತೆಯನ್ನು ಹೊಂದಿದ್ದು, ಇದರಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತು ಕ್ಷೇತ್ರದ ಜನತೆಗೆ ಶುಭಾಶಯಗಳನ್ನು ತಿಳಿಸುವ ಪೋಸ್ಟ್‍ಗಳನ್ನು ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಫೇಸ್‍ಬುಕ್ ಖಾತೆಗೆ ಲೀಪಡ್ ಫಿಫ್ಟಿ ಎಯಿಟ್ ಹಿಲ್ಸ್, ಟಿಪ್ಪು ಸುಲ್ತಾನ್ ಮತ್ತು ಅಮ್ಮ ಕೊಡಗು ಎಂಬ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ಅವಾಚ್ಯ ಶಬ್ಧಗಳಿಂದ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸುನಿಲ್ ಸುಬ್ರಮಣಿ ಅವರ ಆಪ್ತ ಸಹಾಯಕ ಬಿ.ಎಸ್.ಪರಮೇಶ್ ಅವರು ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.