ಮಣ್ಣು ಪರೀಕ್ಷಾ ಘಟಕ : ಅರ್ಜಿ ಆಹ್ವಾನ

27/10/2020

ಮಡಿಕೇರಿ ಅ.27 : ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದ ಮಣ್ಣು ಆರೋಗ್ಯ ನಿರ್ವಹಣೆ ಯೋಜನೆಯಡಿ ಗ್ರಾಮ ಮಟ್ಟದಲ್ಲಿ ಮಣ್ಣು ಪರೀಕ್ಷಾ ಪ್ರಾಯೋಜನೆ ಸ್ಥಾಪಿಸಲು ಕೇಂದ್ರ ಸರ್ಕಾರವು ಮಾರ್ಗಸೂಚಿ ನೀಡಿದ್ದು, ಈ ಪ್ರಾಯೋಜನೆಯ ಉದ್ದೇಶವು ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿ ಮತ್ತು ನಿಗಧಿತ ಸಮಯದಲ್ಲಿ ಮಣ್ಣು ಮಾದರಿಗಳ ವಿಶ್ಲೇಷಣೆ ಮಾಡುವುದಾಗಿದೆ.
ಮಣ್ಣು ಮಾದರಿ ಸಂಗ್ರಹಣ, ವಿಶ್ಲೇಷಣೆ ಮತ್ತು ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸುವುದಲ್ಲದೇ, ಫಲಾನುಭವಿಗಳು ಮಣ್ಣು ಮಾದರಿಗಳ ವಿಶ್ಲೇಷಣೆಯ ಫಲಿತಾಂಶಗಳನ್ನು ಮತ್ತು ಮಣ್ಣು ಮಾದರಿ, ರೈತರ ವಿವರಗಳನ್ನು ಅಧಿಕಾರಿಗಳಿಗೆ ಸಲ್ಲಿಸುವುದು. ಅರ್ಜಿದಾರರು, ಫಲಾನುಭವಿಗಳು ಗ್ರಾಮ ಮಟ್ಟದಲ್ಲಿ ಮಣ್ಣು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲು ಸ್ವಂತ ಕಟ್ಟಡವನ್ನು ಹೊಂದಿರಬೇಕು. ಕನಿಷ್ಠ 4 ವರ್ಷಗಳ ಅವಧಿಗೆ ಬಾಡಿಗೆ ಕರಾರು ಪತ್ರ ಹೊಂದಿರಬೇಕು.
ಪ್ರತಿ ಮಣ್ಣು ಪರೀಕ್ಷಾ ಪ್ರಾಯೋಜನೆಯ ಯೋಜನಾ ವೆಚ್ಚ ರೂ.5 ಲಕ್ಷಗಳಿದ್ದು, ಶೇ.75 ರಷ್ಟು ಅಂದರೆ ರೂ.3.75 ಲಕ್ಷಗಳನ್ನು ಸಹಾಯಧನವನ್ನು ಫಲಾನುಭವಿಗಳು ಪಡೆಯಲು ಅರ್ಹರಾಗಿದ್ದಾರೆ. ಕೃಷಿ ಕ್ಲಿನಿಕ್ ಮತ್ತು ವ್ಯಾಪಾರ ಕೇಂದ್ರಗಳು, ಕೃಷಿ ಉದ್ದಿಮೆದಾರರು, ಮಾಜಿ ಯೋಧರು, ಸ್ವಸಹಾಯ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳು(ಎಫ್‍ಪಿಒ), ರೈತರ ಉತ್ಪನ್ನ ಕಂಪನಿಗಳು (ಎಫ್‍ಪಿಸಿ), ರೈತರ ಜಂಟಿ ಜವಾಬ್ದಾರಿ ಗುಂಪುಗಳು, ರೈತರ ಸಹಕಾರ ಸಂಘಗಳು, ಪಿಎಸಿಎಸ್, ಪರಿಕರಗಳ ರಿಟೇಲ್ ಔಟ್‍ಲೆಟ್‍ಗಳು, ಪರಿಕರಗಳ ರಿಟೇಲ್‍ದಾರರು, ಶಾಲೆಗಳು, ಕಾಲೇಜುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ.ಷೇಕ್ ಅವರು ಕೋರಿದ್ದಾರೆ.