ಪೌತಿ ಖಾತೆ ಆಂದೋಲನ ಆರಂಭ : ಅಗತ್ಯ ದಾಖಲೆ ಒದಗಿಸಲು ಮನವಿ

27/10/2020

ಮಡಿಕೇರಿ ಅ.27 : ಕೃಷಿ ಜಮೀನು ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತ ಉತ್ತಾರಾಧಿಗಳ ಹೆಸರಿಗೆ ಬದಲಾವಣೆಯಾಗದಿದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ, ಕುಟುಂಬಸ್ಥರಿಗೆ ಜಮೀನು ಅಭಿವೃದ್ದಿ ಪಡಿಸಲು ಸಾಲ ಸೌಕರ್ಯ, ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ/ ಪರಿಹಾರದ ಮೊಬಲಗನ್ನು ಪಡೆಯಲು ಉಂಟಾಗುವ ಸಮಸ್ಯೆ ಹಾಗೂ ಸರ್ಕಾರದ ಇನ್ನಿತರ ಸೌಲಭ್ಯವನ್ನು ಪಡೆಯಲು ಆಗುವ ತೊಂದರೆಗಳನ್ನು ಪರಿಹರಿಸಲು ಪೌತಿ/ ವಾರಸಾ ಸ್ವರೂಪದ ಮ್ಯುಟೇಶನ್ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸಿ ಪೌತಿ/ವಾರಸಾ ಖಾತೆಯ ಆಂದೋಲನವನ್ನು ನಡೆಸಲು ಕರ್ನಾಟಕ ಸರ್ಕಾರವು ಅ. 17ರಲ್ಲಿ ಮಾರ್ಗಸೂಚಿಗಳನ್ನು ನೀಡಿ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯಂತೆ ಖಾತೆದಾರರ ಪೌತಿಯಾಗಿರುವ ಜಮೀನಿಗೆ ಸಂಬಂಧಿಸಿದ ಪಹಣೆ ದಾಖಲೆಗಳಲ್ಲಿ ಮೃತ ಖಾತೆದಾರರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಲು ಮ್ಯುಟೇಶನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್, 27 ರಿಂದ ಪೌತಿ ಖಾತೆ ಬದಲಾವಣೆ ಆಂದೋಲವನ್ನು ಹಮ್ಮಿಕೊಂಡಿದ್ದು, ಸಂಬಂಧಪಟ್ಟ ಗ್ರಾಮದ ಗ್ರಾಮಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ರೈತಾಪಿ ವರ್ಗದವರು/ ಸಾರ್ವಜನಿಕರು ಪೌತಿ/ ವಾರಸುದಾರಿಕೆಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ/ ಮನವಿ ಸಲ್ಲಿಸಿ ಈ ಆಂದೋಲನದ ಯಶಸ್ವಿಗೆ ಸಹಕರಿಸಬೇಕಾಗಿ ಕೋರಿದೆ.
ಒದಗಿಸಬೇಕಾದ ದಾಖಲೆಗಳು: ನಮೂನೆ 1 ರಲ್ಲಿ ಪೌತಿ/ ವಾರಸಾ ಖಾತೆ ಮಾಡಿಕೊಡುವ ಕುರಿತು ಅರ್ಜಿ, ಖಾತೆದಾರರು ಮೃತರಾಗಿರುವ ಸರ್ವೇ ನಂಬರ್‍ಗಳ ಪಹಣಿ(ಆರ್‍ಟಿಸಿ), ಮೃತರ ಮರಣದ ಸಮರ್ಥನೆ ಪತ್ರ, ವಂಶವೃಕ್ಷ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್, ನಮೂನೆ-1 ರ ಅರ್ಜಿಯನ್ನು ಜಿಲ್ಲಾಡಳಿತದ ವೆಬ್‍ಸೈಟ್ www.kodagu.nic.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.