ಸೋಮವಾರಪೇಟೆಯಲ್ಲಿ ಭ್ರಷ್ಟಾಚಾರ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ

27/10/2020

ಸೋಮವಾರಪೇಟೆ ಅ. 27 : ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಭ್ರಷ್ಟಾಚಾರ ವಿರುದ್ಧ ಜಾಗೃತ ಅರಿವು ಕಾರ್ಯಕ್ರಮ ಪತ್ರಿಕಾ ಭವನದಲ್ಲಿ ನಡೆಯಿತು.
ಇಲಾಖೆಯ ಇನ್ಸ್‍ಪೆಕ್ಟರ್ ಶ್ರೀಧರ್ ಮಾತನಾಡಿ, ಯಾವುದೇ ಸರ್ಕಾರಿ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದಲ್ಲಿ, ನಿರ್ಲಕ್ಷ್ಯತೆ ಅಥವಾ ಲಂಚದ ಬೇಡಿಕೆ ಇಟ್ಟಲ್ಲಿ ಕೂಡಲೇ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆ ಅಥವಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಬೇಕು ಎಂದರು.

ತೊಂದರೆಗೊಳಗಾದ ಸಾರ್ವಜನಿಕರು ದೂರು ನೀಡಲು ಮುಂದೆ ಬರದಿದ್ದಲ್ಲಿ, ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದುದ್ದರಿಂದ ದೂರು ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ಲಂಚಕೋರರ ಹಾವಳಿ ಮಿತಿಮೀರಿದೆ. ರೈತರ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ಪ್ರತಿ ಕೆಲಸಗಳಿಗೆ ಇಂತಿಷ್ಟು ಬೆಲೆ ನಿಗದಿಗೊಳಿಸಿ, ಹಣ ವಸೂಲಿ ಮಾಡುತ್ತಿದ್ದಾರೆ. ಮೊದಲು ಕಂದಾಯ ಇಲಾಖೆಯನ್ನು ಸರಿಪಡಿಸಿ ಎಂದು ಮಸಗೋಡು ಸುರೇಶ್, ಕಲ್ಕಂದೂರು ಗ್ರಾಮದ ರವೀಶ್ ಸೇರಿದಂತೆ ಹಲವರು ಮನವಿ ಮಾಡಿಕೊಂಡರು.


ಮಳೆಯಿಂದ ಹಾನಿಯಾದ ಮನೆಗೆ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ನೀಡಲು ಹೋದರೆ, ಸಂಬಂಧಿಸಿದ ಅಧಿಕಾರಿ ಹಣದ ಬೇಡಿಕೆ ಇಟ್ಟು ಅರ್ಜಿಯನ್ನು ಸ್ವೀಕರಿಸಲಿಲ್ಲ ಎಂದು ಕಾರೆಕೊಪ್ಪ ಗ್ರಾಮದ ಶಿವಾನಂದ ದೂರಿದರು.
ಆರ್‍ಟಿಓ ಇಲಾಖೆಯ ಕೆಲಸಗಳನ್ನು ಮದ್ಯವರ್ತಿಗಳ ಮೂಲಕವೇ ಮಾಡಿಸಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳೇ ಸೂಚಿಸುತ್ತಿದ್ದಾರೆ. ನೇರವಾಗಿ ಹೋದಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಹೆಚ್ಚಿನ ಹಣ ವಸೂಲಿ ಮಾಡುವ ಮೂಲಕ ಸಾರ್ವಜನಿಕರ ಕೆಲಸಗಳನ್ನು ಕೆಲವು ಆರ್‍ಟಿಓ ಮದ್ಯವರ್ತಿಗಳು ಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ಆಟೋ ನಿಲ್ದಾಣದಲ್ಲಿ ದಾಖಲಾತಿ ಮತ್ತು ವಾಹನಗಳನ್ನು ತಪಾಸಣೆ ಮಾಡಲು ಅನುಮತಿ ಇಲ್ಲದಿದ್ದರೂ, ಪಟ್ಟಣಕ್ಕೆ ಬಂದು ತಪಾಸಣೆ ಮಾಡುತ್ತಿದ್ದಾರೆ. ಆಟೋಗಳ ಎಫ್‍ಸಿ ಮಾಡಿಸಲು ಮಡಿಕೇರಿಗೆ ಬರಲು ತಿಳಿಸುತ್ತಿದ್ದಾರೆ.

ಆದರೆ, ನಮಗೆ ಕೇವಲ 15 ಕಿ.ಮೀ ಗೆ ಮಾತ್ರ ಸಂಚರಿಸಲು ಅನುಮತಿ ಇದೆ. ಆರ್‍ಟಿಓ ಅಧಿಕಾರಿಗಳನ್ನು ಒತ್ತಾಯಿಸಿದ ಮೆರೆಗೆ ಸಮೀಪದ ಬೇಳೂರು ಗ್ರಾಮಕ್ಕೆ ಬಂದು ಅಲ್ಲಿಗೆ ವಾಹನಗಳನ್ನು ತಂದು ತಪಾಸಣೆ ಮಾಡಿಸಿದ್ದಾರೆ ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೋಹನ್, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್‍ಶೆಟ್ಟಿ, ವಕ್ಫ್ ಮಂಡಳಿಯ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎ. ಯಾಕೂಬ್, ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ಸೇರಿದಂತೆ ಹಲವರು ದೂರಿದರು.
ಸಾರ್ವಜನಿಕರ ಹಿತ ಕಾಯಲು ಸರ್ಕಾರ ಕಾನೂನನ್ನು ಮಾಡಿದೆ. ಯಾರು, ಯಾರ ವಿರುದ್ಧವೂ ಸುಳ್ಳು ದೂರು ದಾಖಲಿಸುವಂತಿಲ್ಲ. ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ನಮ್ಮ ಇಲಾಖೆಯನ್ನು ಪ್ರಾರಂಭಿಸಲಾಗಿದೆ. ಆದರೆ, ಸಂಪೂರ್ಣ ಭ್ರಷ್ಟಾಚಾರ ಮುಕ್ತ ಮಾಡಲು ಸಾಧ್ಯವಾಗದಿದ್ದರೂ, ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ಅದಕ್ಕೆ ಸಾರ್ವಜನಿರು ತಮಗಾದ ಅನ್ಯಾಯದ ವಿರುದ್ಧ ಸಂಬಂಧಿಸಿದ ಅಧಿಕಾರಿ ಅಥವಾ ಇಲಾಖೆಯ ಮೇಲೆ ದೂರು ನೀಡಿದಲ್ಲಿ ಮಾತ್ರ ಸಾಧ್ಯ. ಆದುದ್ದರಿಂದ ಜನರು ಅಳುಕದೆ, ತಮಗಾದ ತೊಂದರೆಯ ವಿರುದ್ಧ ಸೂಕ್ತ ದೂರು ನೀಡುವಂತೆ ಸಿಪಿಐ ಮನವಿ ಮಾಡಿದರು.
ವೇದಿಕೆಯಲ್ಲಿ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಇಲಾಖಾಧಿಕಾರಿಗಳಾದ ದಿನೇಶ್, ಲೋಹಿತ್ ಹಾಗು ಪ್ರವೀಣ್ ಇದ್ದರು.