ಸಂತ್ರಸ್ತರಿಗೆ ದೊರೆಯದ ಪರಿಹಾರ : ಕುಶಾಲನಗರ ನದಿ ದಂಡೆ ನಿವಾಸಿಗಳ ಗೋಳು ಕೇಳೋರಿಲ್ಲ

28/10/2020

ಮಡಿಕೇರಿ ಅ.28 : ಕಳೆದ ಅಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಕುಶಾಲನಗರದ ಕಾವೇರಿ ನದಿ ದಂಡೆಯ ಪ್ರದೇಶಗಳಲ್ಲಿ ನದಿ ನೀರು ನುಗ್ಗಿ ಬೆಳೆ ಹಾನಿಯ ಜೊತೆಗೆ 400ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದಾರೂ ಅರ್ಹ ಸಂತ್ರಸ್ತರಿಗೆ ಇನ್ನೂ ಪರಿಹಾರ ದೊರಕಿಲ್ಲ.
ಕಾವೇರಿ ನದಿ ದಂಡೆಯ ಹಲವಾರು ಪ್ರದೇಶಗಳಲ್ಲಿ ನದಿಯ ಪ್ರವಾಹಕ್ಕೆ ಬೆಳೆ ಹಾನಿಯಾಗಿರುವುದರ ಜೊತೆಗೆ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇನ್ನಿತರ ಸಾಮಾಗ್ರಿಗಳು ನಷ್ಟವಾಗಿದೆ. ಈ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವಾಗಿ ತಲಾ 10 ಸಾವಿರ ರೂ.ಗಳನ್ನು ನೀಡುವುದಾಗಿ ಸರಕಾರ ಘೋಷಿಸಿತ್ತಲ್ಲದೆ, ಆ ನಂತರದಲ್ಲಿ ನಷ್ಟದ ಅಂದಾಜು ಮಾಡಿ ಪರಿಹಾರ ನೀಡುವುದಾಗಿ ಹೇಳಿತ್ತು. ಆದರೆ ಮನೆಯ ವಸ್ತುಗಳನ್ನು ಕಳೆದುಕೊಂಡ ಅರ್ಹ ಸಂತ್ರಸ್ತರಿಗೆ ಇದುವರೆಗೂ ಪರಿಹಾರ ಲಭ್ಯವಾಗಿಲ್ಲ.
ಕಾವೇರಿ ನದಿಯ ದಂಡೆಯ ಪ್ರದೇಶದಲ್ಲಿರುವ ಮನೆಗಳಿಗೆ ಅಧಿಕಾರಿ ವರ್ಗದವರುಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿ ಎರಡು ತಿಂಗಳುಗಳಾಗಿದ್ದರೂ, ನಷ್ಟಕ್ಕೆ ಒಳಗಾದವರಿಗೆ ಪರಿಹಾರ ದೊರಕಿಲ್ಲ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬೆಳೆ ಹಾಳಾದ ರೈತರ ಜಮೀನುಗಳಿಗೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ್ದರೂ, ಪ್ರಯೋಜನವಾಗಿಲ್ಲ.
ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಗುಡ್ಡಹೊಸೂರು, ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ನಂಜರಾಯಪಟ್ಟಣ ನೆಲ್ಲಿಹುದಿಕೇರಿ, ಕೂಡ್ಲೂರು ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 400ಕ್ಕೂ ಹೆಚ್ಚಿನ ಮನೆಗಳು ಹಾನಿಯಾಗಿವೆ. ಅಲ್ಲದೆ ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಅಪರಾ ಪ್ರಮಾಣದ ನಷ್ಟ ಉಂಟಾಗಿದೆ. ನೀರಿನಿಂದ ಜಲಾವೃತಗೊಂಡ ಮನೆಗಳಿಗೆ ಹಾಗೂ ಕೃಷಿ ನಷ್ಟವಾದವರಿಗೆ ಪರಿಹಾರ ನೀಡುವುದಾಗಿ ಸಂಬಂಧಿಸಿದ ಇಲಾಖೆಗಳು ಹೇಳಿದ್ದರೂ ಇದುವರೆಗೂ ಯಾವುದೇ ಸ್ಪಂದನ ದೊರಕಿಲ್ಲ ಎಂಬುದು ಸಂತ್ರಸ್ತರ ಅಳಲಾಗಿದೆ.
ಇದುವರೆಗೂ ಕೊರೋನಾ ನೆಪ ಹೇಳಿಕೊಂಡು ಕಾಲಹರಣ ಮಾಡಿದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡುವಂತಾಗಬೇಕು ಎಂಬುದು ಕುಶಾಲನಗರ ಹೋಬಳಿ ವ್ಯಾಪ್ತಿಯ ವಿವಿಧ ಸಂಘಸಂಸ್ಥೆಗಳ ಹಾಗೂ ಸಂತ್ರಸ್ತರ ಒತ್ತಾಯವಾಗಿದೆ.