ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾದ ‘ಕೊಡವ ಹೆರಿಟೇಜ್ ಸೆಂಟರ್’ ಯೋಜನೆ

ಮಡಿಕೇರಿ ಅ.28 : ವಿದ್ಯಾನಗರದ ಬಳಿ ಇರುವ ‘ಕೊಡವ ಹೆರಿಟೇಜ್ ಸೆಂಟರ್’ ಇದೊಂದು ಮಹತ್ವಾಕಾಂಕ್ಷೆಯ ಯೋಜನೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಂದು ಕೊಡವ ಸಮುದಾಯದ ಪದ್ದತಿ-ಪರಂಪರೆ, ಆಚಾರ ವಿಚಾರಗಳು, ಜೀವನ ಶೈಲಿ ಮತ್ತಿತ್ತರ ವಿಚಾರಗಳ ಮಾಹಿತಿಗಾಗಿ ಕೊಡವ ಹೆರಿಟೇಜ್ ಸೆಂಟರ್ ಅಧ್ಯಯನ ಕೇಂದ್ರವಾಗಿ ಮಾರ್ಪಡುತ್ತಿತ್ತು. ಆದರೆ ಕೆಲವು ಇಲಾಖೆಗಳು, ಜನ ಪ್ರತಿನಿಧಿಗಳು, ಸರಕಾರಿ ಆಡಳಿತ ಯಂತ್ರದ ಸೂತ್ರಧಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗಳಿಂದ ಈ ಮಹಾತ್ವಾಕಾಂಕ್ಷೆಯ ಯೋಜನೆ ಇನ್ನೂ ಕೂಡ ನಿರೀಕ್ಷಿತ ಪ್ರಗತಿ ಕಾಣದೆ ಕಾಡುಪಾಲಾಗಿದೆ.
ಆರಂಭದಲ್ಲಿ 88.75 ಲಕ್ಷ ರೂ.ಗಳಿಂದ ಪ್ರಾರಂಭವಾದ ಹೆರಿಟೇಜ್ ಕಟ್ಟಡ ಕಾಮಗಾರಿ ಇಂದು 3.30 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 2020ರ ಮೇ.27ರಂದು ರಾಜ್ಯ ಸರಕಾರ ಲೋಕೋಪಯೋಗಿ ಇಲಾಖೆಗೆ ಮುಂದಿನ 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾರ್ಯಾದೇಶ ನೀಡಿದೆ. ಕೊರೊನಾ ಮಾಹಾಮಾರಿ, ಮಹಾಮಳೆ ಮತ್ತಿತ್ತರ ಕಾರಣಗಳಿಂದ ನಡೆಯಬೇಕಿದ್ದ ಕಾಮಗಾರಿ ಮತ್ತೆ ಆಮೆ ವೇಗಕ್ಕೆ ಹೊರಳಿದೆ.
ಕೇಂದ್ರ ಸರಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಪ್ರಾರಂಭಿಕ ಅನುದಾನ ಸಹಿತ ಯೋಜನೆ ಅಸ್ತಿತ್ವ ಪಡೆದುಕೊಂಡು ಬಳಿಕ ರಾಜ್ಯ ಸರಕಾರದ ಮೂಲಕ ಅನುಷ್ಟಾನಗೊಂಡು ಕೊಡಗು ಜಿಲ್ಲಾಧಿಕಾರಿಗಳ ಮೂಲಕ ಕಾಮಗಾರಿ ಆರಂಭ ಕಾಣುವಂತಾಯಿತು. ಆದರೆ ವಿಪರ್ಯಾಸ ಎಂದರೆ ಸತತ ಹತ್ತಾರು ವರ್ಷಗಳಿಂದ ಈ ಹೆರಿಟೇಜ್ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ. ಅದೆಷ್ಟೋ ಮಳೆ, ಗಾಳಿ, ಬಿಸಿಲಿಗೆ ಈ ಅಪೂರ್ಣ ಕಟ್ಟಡ ಮೈಒಡ್ಡಿ ನಿಂತಿದೆ. ಹೀಗಾಗಿ ಕಟ್ಟಡ ಸುಸ್ಥಿತಿಯ ಬಗ್ಗೆ ಸಾಮಾನ್ಯ ಜನರೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಕಟ್ಟಡದ ಗೋಡೆಗಳನ್ನು ಕೆಂಪು ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದ್ದು, ಸರಿಯಾದ ಸಮಯದಲ್ಲಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡದಿರುವ ಹಿನೆÀ್ನಲೆಯಲ್ಲಿ ಕಟ್ಟಡ ಶಿಥಿಲಾವಸ್ಥೆಗೆ ಹೊರಳಿದೆ. ಕಟ್ಟಡದ ಗೋಡೆಗಳ ಮೇಲೆ ಹುಲ್ಲು ಬೆಳೆದಿದ್ದರೆ, ಆವರಣದಲ್ಲಿ ಕಾಡುಗಿಡಗಳು ಬೆಳೆದು ನಿಂತಿದ್ದು, ಒಂದರ್ಥದಲ್ಲಿ ಕೊಡವ ಹೆರಿಟೇಜ್ ಸೆಂಟರ್ ಸಂಪೂರ್ಣ ಕಾಡುಪಾಲಾಗಿರುವುದು ಕಂಡು ಬರುತ್ತದೆ. ಕಟ್ಟಡದ ಗೋಡೆಗಳು ಕುಸಿದು ಬಿದ್ದಿರುವುದು, ಮೆಟ್ಟಿಲುಗಳಿಗೆ ಅಳವಡಿಸಿದ್ದ ಕೆಂಪುಕಲ್ಲುಗಳು ಪುಡಿಯಾಗಿರುವುದು, ಸಿಮೆಂಟ್ ಪಿಲ್ಲರ್‍ಗಳು, ತಡೆಗೋಡೆಗಳು ಬಿರುಕು ಬಿಟ್ಟಿರುವುದು ಕಳಪೆ ಕಾಮಗಾರಿಯ ಸಂಶಯಗಳನ್ನು ಹುಟ್ಟು ಹಾಕುತ್ತಿದೆ. ಅಪೂರ್ಣ ಕಟ್ಟಡದ ಒಳಗೆ ಮರದ ಹಲಗೆಗಳ ರಾಶಿ, ಮಂಗಳೂರು ಹೆಂಚುಗಳ ಗುಡ್ಡೆಗಳು ಮಾತ್ರವೇ ಕಂಡು ಬರುತ್ತಿದೆ.
ವಿದ್ಯಾನಗರ ಬಳಿ ಇರುವ ಕೊಡವ ಹೆರಿಟೇಜ್ ಸೆಂಟರ್ ಬಗ್ಗೆ ಜನ ಪ್ರತಿನಿಧಿಗಳು, ಸಮಾಜಗಳು, ಸಂಘಟನೆಗಳು ಕೂಡ ಹೆಚ್ಚಿನ ಕಾಳಜಿ ಹೊಂದಿಲ್ಲ. ಕಟ್ಟಡದ ಮೆಟ್ಟಿಲುಗಳಿಗೆ ಅಳವಡಿಸಿದ್ದ ಗ್ರಾನೈಟ್ ಕಲ್ಲುಗಳು, ರೂಫಿಂಗ್‍ಗೆ ಬಳಸುವ ಮರದ ಹಲಗೆಗಳು, ಮಂಗಳೂರು ಹೆಂಚುಗಳು ಕಳ್ಳರ ಪಾಲಾಗಿದೆ.
2018ರ ನ.27ರಂದು ಕಟ್ಟಡ ಕಾಮಗಾರಿಯ ಗುತ್ತಿಗೆಯನ್ನು ಲೋಕೋಪಯೋಗಿ ಇಲಾಖೆ ರದ್ದುಪಡಿಸಿದೆ. ಮಾತ್ರವಲ್ಲದೇ, ಕಾಮಗಾರಿಯನ್ನು ಅರ್ಧದಲ್ಲೇ ಕೈಬಿಟ್ಟ ಮೈಸೂರಿನ ಗುತ್ತಿಗೆದಾರ ಎಂ.ಬಿ. ಹೇಮಶಂಕರ್ ಎಂಬಾತನನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವುದು, ಆತನಿಂದ ಹಣ ವಸೂಲಿ ಮಾಡುವ ಕೆಲಸಗಳಿಗೆ ಶಿಫಾರಸುಗಳನ್ನು ಮಾಡಲಾಗಿದೆ. ಗುತ್ತಿಗೆದಾರನಿಂದ ದಂಡ ರೂಪದಲ್ಲಿ ಒಟ್ಟು 42 ಲಕ್ಷ ರೂ.ಗಳನ್ನು ಮತ್ತೆ ವಸೂಲಿ ಮಾಡಬೇಕಿದೆ. ಆದರೆ ಇದೊಂದು ಕಣ್ಣು ಕಟ್ಟುವ ತಂತ್ರ ಎಂಬ ಸಂಶಯಗಳು ಕೂಡ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಪ್ರಸ್ತುತ ಸ್ಥಳದಲ್ಲಿ ನೂರಾರು ಕೆಂಪು ಕಲ್ಲಿನ ಇಟ್ಟಿಗೆ, ಎಂ.ಸ್ಯಾಂಡ್ ಗುಡ್ಡೆ, ಮಂಗಳೂರು ಹೆಂಚಿನ ಜೋಡಣೆ ಕಂಡು ಬರುತ್ತಿದ್ದು, ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಇನ್ನು ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿ ಆರಂಭವಾದ ಬಳಿಕ ಅದರ ಸುತ್ತ ಜಿಲ್ಲಾ ಪಂಚಾಯಿತಿ ಭವನ, ಜಿಲ್ಲಾ ನ್ಯಾಯಾಲಯ ಕಟ್ಟಡ, ಕೇಂದ್ರೀಯ ವಿದ್ಯಾಲಯ ಕಟ್ಟಡಗಳು ತಲೆ ಎತ್ತಿದೆ. ಈ ಪೈಕಿ ಜಿಲ್ಲಾ ಪಂಚಾಯಿತಿ ಕಟ್ಟಡ ಮತ್ತು ಕೇಂದ್ರೀಯ ವಿದ್ಯಾಲಯ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿವೆ. ಜಿಲ್ಲಾ ನ್ಯಾಯಾಲಯ ಕಟ್ಟಡದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಪ್ರಸ್ತುತ ಪ್ರಗತಿಯಲ್ಲಿದೆ. ಈ 3 ಸರಕಾರಿ ಸ್ವಾಮ್ಯದ ಕಟ್ಟಡಗಳು ಕೂಡ ಕೋಟಿ ರೂ.ಗಳ ವೆಚ್ಚದ್ದಾಗಿದೆ. ಮಾತ್ರವಲ್ಲದೇ ಈ ಕಟ್ಟಡಗಳ ನಿರ್ಮಾಣ ಕಾಮಗಾರಿ ಬೆರಳೆಣಿಕೆಯ ವರ್ಷದಲ್ಲೇ ಪೂರ್ಣಗೊಂಡಿದೆ.
ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಂ, ಪ್ರಸ್ತುತ ಕಟ್ಟಡದ ರಕ್ಷಣೆ ಮಾಡಬೇಕಿರುವ ಹಿನ್ನೆಲೆಯಲ್ಲಿ ರೂಫಿಂಗ್, ಫ್ಲೋರಿಂಗ್ ಮತ್ತಿತ್ತರ ಕಾಮಗಾರಿಯನ್ನು ನಡೆಸಲಾಗುತ್ತದೆ. 1.50 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಮಡಿಕೇರಿಯ ಲೋಕೋಪಯೋಗಿ ಗ್ರೇಡ್-1 ಗುತ್ತಿಗೆದಾರ ಕಿಶೋರ್‍ಬಾಬು ಅವರಿಗೆ ಟೆಂಡರ್ ಮೂಲಕ ವಹಿಸಲಾಗಿದೆ ಎಂದರು.
ಮಳೆ, ಕೊರೊನಾ ಮತ್ತಿತ್ತರ ಕಾರಣಗಳಿಂದ ಕಾಮಗಾರಿ ನಡೆಸುವುದು ತಡವಾಗಿದೆ. ದಸರಾ ಮುಗಿದ ಬಳಿಕ ಕಾಮಗಾರಿ ಆರಂಬವಾಗುತ್ತದೆ. ಮಾರ್ಚ್ ಅಂತ್ಯಕ್ಕೆ ವಹಿಸಲಾದ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರರಿಗೆ ಸಮಯ ನಿಗಧಿ ಮಾಡಲಾಗಿದೆ ಎಂದು ಹೇಳಿದರು. ಗುತ್ತಿಗೆದಾರರರೇ ಮೊದಲಿಗೆ ಕಾಮಗಾರಿಗೆ ಹಣ ವ್ಯಯಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗುತ್ತಿದೆ. ಕಾಮಗಾರಿಯ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಇಂಜಿನಿಯರ್‍ಗಳು ಮೇಲ್ವಿಚಾರಣೆ ನಡೆಸುತ್ತಾರೆ ಎಂದು ಹೇಳಿದರು. ಇದಕ್ಕೂ ಮುನ್ನ ಗುತ್ತಿಗೆದಾರರು ಸೆಕ್ಯುರಿಟಿ ಮೊತ್ತವನ್ನು ಇಲಾಖೆಗೆ ಟೆಂಡರ್ ಸಂದರ್ಭ ನೀಡಬೇಕಿರುತ್ತದೆ. ಕಾಮಗಾರಿ ಪೂರ್ಣವಾದ ಬಳಿಕ ಎಲ್ಲಾ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಪ್ರವಾದೋದ್ಯಮ ಇಲಾಖೆ ಮೂಲಕ ಅನುಷ್ಟಾನ ವಾಗುತ್ತಿರುವ ಯೋಜನೆಯ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಮಾಡಲಾಗುತ್ತಿದೆ. ಕಾಮಗಾರಿ ಮುಕ್ತಾಯವಾದ ಬಳಿಕ ಪ್ರವಾಸೋದ್ಯಮ ಇಲಾಖೆಗೆ ಒಪ್ಪಿಸಲಾಗುತ್ತದೆ ಎಂದು ಹೇಳಿದರು. ಈ ಹಿಂದೆ ನಡೆಸಲಾದ ರೂಫಿಂಗ್ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಕಟ್ಟಡ ಗೋಡೆಯ ಕೆಂಪು ಕಲ್ಲುಗಳು ಮಳೆ ನೀರಿನಿಂದ ಹಾನಿಗೆ ಒಳಗಾಗಿವೆ ಎಂದು ಮಾಹಿತಿ ನೀಡಿದರು.


