ಬೆಳೆಹಾನಿ ಪರಿಹಾರದಲ್ಲಿ ರೈತರಿಗೆ ತೀವ್ರ ಅನ್ಯಾಯ : ಟಾಟು ಮೊಣ್ಣಪ್ಪ ಆರೋಪ

ಪೊನ್ನಂಪೇಟೆ,ಅ.28: ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಬೆಳೆಗೆ ತೀವ್ರ ಹಾನಿಯಾಗಿದೆ. ಎಷ್ಟೇ ಪರಿಹಾರ ನೀಡಿದರೂ ನಷ್ಟ ಸರಿಪಡಿಸಲು ಅಸಾಧ್ಯವಾದ ಸ್ಥಿತಿಯಲ್ಲಿರುವ ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಸರಕಾರ ಅನ್ಯಾಯ ಮಾಡಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಹೊಣೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್‍ನ ವಕ್ತಾರರಾದ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ ಅವರು, ರೈತರಿಗೆ ಅನ್ಯಾಯವೆಸಗಿದ ಅಧಿಕಾರಿಗಳ ಬೇಜಾವಾಬ್ದಾರಿಯನ್ನು ಪ್ರಶ್ನಿಸುವಲ್ಲಿ ಸಂಸದರು ಸೇರಿದಂತೆ ಕೊಡಗಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದ ಭತ್ತ, ಕಾಫಿ, ಕರಿಮೆಣಸು, ಅಡಿಕೆ ಮೊದಲಾದ ಬೆಳೆಗಳಿಗೆ ತೀವ್ರ ಹಾನಿಯುಂಟಾಗಿದೆ. ಕೆಲವೆಡೆ ಭತ್ತದ ಬೆಳೆಗೆ ಈಗಾಗಲೇ ಕಾಯಿಲೆ ಕಾಣಿಸಿಕೊಂಡಿದೆ. ಕಾಫಿ ಉದುರತೊಡಗಿದೆ. ಕರಿಮೆಣಸು ಬಳ್ಳಿಗಳು ಕಾಯಿಲೆಗೆ ತುತ್ತ್ತಾಗುತ್ತಿದೆ. ಕೊಯ್ಲಿಗೆ ಬಂದ ಅಡಿಕೆ ಉದುರಿ ನೆಲಕ್ಕಚ್ಚಿರುವ ದೃಶ್ಯ ಜಿಲ್ಲಾದ್ಯಂತ ಸಾಮಾನ್ಯ ಕಂಡುಬರುತ್ತಿದೆ. ಇದು ರೈತರ ಆರ್ಥಿಕ ವ್ಯವಸ್ಥೆಗೆ ತೀವ್ರ ಪೆಟ್ಟುಬಿದ್ದಂತಾಗಿದೆ. ಮಳೆ ಹಾನಿಯಿಂದಾಗಿ ರೈತರಿಗೆ ಉಂಟಾದ ಆರ್ಥಿಕ ನಷ್ಟವನ್ನು ಅಂದಾಜಿಸಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕಾದ ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿ ತನ್ನ ಕರ್ತವ್ಯವನ್ನು ಸರಿಯಾಗಿ ಪಾಲಿಸಿಲ್ಲ. ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಆದ ಅನ್ಯಾಯಕ್ಕೆ ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿಯೇ ನೇರ ಹೊಣೆಯಾಗಿದ್ದು, ಇವರಿಗೆ ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿ ಯಾವುದೇ ವೈಜ್ಞಾನಿಕವಾದ ಸಮೀಕ್ಷೆ ನಡೆಸದೇ ಜಿಲ್ಲಾಡಳಿತಕ್ಕೆ ವರದಿ ನೀಡಿದ ಪರಿಣಾಮ ಜಿಲ್ಲೆಯ ಕೆಲವೇ ಕೆಲವು ಗ್ರಾಮಗಳನ್ನು ಮಳೆ ಹಾನಿಯಾದ ಗ್ರಾಮ ವ್ಯಾಪ್ತಿಯಡಿಗೆ ಸೇರಿಸಲಾಗಿದೆ. ಪೊನ್ನಂಪೇಟೆ ಹೋಬಳಿಯ ಕೇವಲ 3 ಗ್ರಾಮಗಳನ್ನು ಮಾತ್ರ ಮಳೆ ಹಾನಿಯಾದ ಗ್ರಾಮವೆಂದು ಘೋಷಿಸಲಾಗಿದೆ. ಇದು ತೀರಾ ಅವೈಜ್ಞಾನಿಕ ಕ್ರಮವಾಗಿದ್ದು, ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿರುವ ಟಾಟು ಮೊಣ್ಣಪ್ಪ ಅವರು, ಬೆಳೆ ಹಾನಿಗೊಂಡ ಬಗ್ಗೆ ತಾಲ್ಲೂಕಿನ ರೈತರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅರ್ಜಿಯನ್ನು ಕಾಟಾಚಾರಕ್ಕೆ ಸ್ವೀಕರಿಸಿದ ಕಂದಾಯ ಇಲಾಖೆ ಅದನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೇ ನಿರ್ಲಕ್ಷ್ಯವಹಿಸಲಾಗಿದ್ದು, ಜಿಲ್ಲಾಧಿಕಾರಿಗಳು ಕೂಡ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಪಾಧಿಸಿದ್ದಾರೆ.
ರೈತರಿಗೆ ಜನವಿರೋಧಿ ಅಧಿಕಾರಿಗಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಇದನ್ನು ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಜನರ ಹಿತವನ್ನು ಮರೆತು ಮೌನವಹಿಸಿರುವ ಹಿಂದಿನ ರಹಸ್ಯ ಕೊಡಗಿನ ಜನತೆಗೆ ತಿಳಿಯಬೇಕಾಗಿದೆ. ಬೆಳೆ ಹಾನಿ ಕುರಿತಂತೆ ಸೂಕ್ತ ಪರಿಹಾರ ವಿತರಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಿಶೇಷ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಬೇಕಾದ ಸಂಸದರಾದ ಪ್ರತಾಪ್ ಸಿಂಹ ಅವರು ಕೊಡಗಿನ ಜನರನ್ನು ಮರೆತಂತಿದೆ. ಇದೀಗ ಕೊಡಗಿನ ಕಡೆ ತಲೆ ಹಾಕಿಯೂ ಮಲಗದ ಸಂಸದರು ಅಪರೂಪಕ್ಕೊಮ್ಮೆ ಕೊಡಗಿಗೆ ಭೇಟಿ ನೀಡಿ ಮತ್ತೆ ಮೈಸೂರಿಗೆ ತೆರಳುತ್ತಿದ್ದು, ಪ್ರತಾಪ್ ಸಿಂಹ ಅವರು ಕೊಡಗನ್ನು ಕೇವಲ ಪ್ರವಾಸಿತಾಣವಾಗಿ ಮಾತ್ರ ಪರಿಗಣಿಸಿದ್ದಾರೆ ಎಂದು ಲೇವಡಿ ಮಾಡಿರುವ ಟಾಟು ಮೊಣ್ಣಪ್ಪ ಅವರು, ಚುನಾವಣಾ ಸಂದರ್ಭದಲ್ಲಿ ಮಾತ್ರ ಕೊಡಗಿನ ಜನರನ್ನು ನೆನಪಿಸಿಕೊಳ್ಳುವ ಪ್ರತಾಪ್ ಸಿಂಹ ಕೊಡಗಿನ ಮತದಾರರಿಗೆ ನಿರಂತರವಾಗಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿರಾಜಪೇಟೆ ಕ್ಷೇತ್ರದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಈ ಬಗ್ಗೆ ಗಂಭೀರವಾಗಿ ಪರಿಗಣಿಸದ ಶಾಸಕ ಕೆ.ಜಿ. ಬೋಪಯ್ಯ ಅವರು ಕಳೆದ ಕೆಲ ಸಮಯದಿಂದ ಮೌನಕ್ಕೆ ಶರಣಾಗಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಬೇಕಾದ ಶಾಸಕರು ಈ ಬಗ್ಗೆ ಯಾವುದೇ ಚಕಾರ ಎತ್ತದಿರುವುದು ಜನವಲಯದಲ್ಲಿ ಭಾರಿ ಸಂಶಯ ಮೂಡಿಸುತ್ತಿದೆ. ಪೊನ್ನಂಪೇಟೆ, ಶ್ರೀಮಂಗಲ, ಬಾಳೆಲೆ, ಹುದಿಕೇರಿ ಹೋಬಳಿಯ ಕೆಲವೇ ಕೆಲವು ಗ್ರಾಮಗಳನ್ನು ಮಳೆ ಹಾನಿ ವ್ಯಾಪ್ತಿಯಡಿ ಸೇರಿಸಿದ ಅಧಿಕಾರಿಗಳ ಜನವಿರೋಧಿ ನೀತಿಯ ವಿರುದ್ದ ಶಾಸಕರು ಕೂಡಲೇ ತಮ್ಮ ನಿಲುವನ್ನು ಬಹಿರಂಗ ಪಡಿಸಬೇಕೆಂದು ಟಾಟು ಮೊಣ್ಣಪ್ಪ ಒತ್ತಾಯಿಸಿದ್ದಾರೆ.
ಜಿಲ್ಲಾಧ್ಯಂತ ಕಳೆದ ಮಳೆಗಾಲದಲ್ಲಿ ವ್ಯಾಪಕ ಮಳೆಯಾದ ಕಾರಣ ಜಿಲ್ಲೆಯ ಎಲ್ಲಾ ಅರ್ಹ ಗ್ರಾಮಗಳನ್ನು ಮಳೆ ಹಾನಿ ವ್ಯಾಪ್ತಿಯಡಿ ಸೇರ್ಪಡೆಗೊಳಿಸಬೇಕು. ಇದಕ್ಕಾಗಿ ಮತ್ತೊಮ್ಮೆ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕು. ವಿವಿಧ ಬೆಳೆಗಳನ್ನು ಬೆಳೆದ ಎಲ್ಲಾ ರೈತರು ಮಳೆ ಹಾನಿಯಿಂದಾಗಿ ನಷ್ಟ ಅನುಭವಿಸಿದ್ದು, ಅವರಿಗೆ ಕೂಡಲೇ ಸೂಕ್ತ ಸಮಾನ ಪರಿಹಾರ ನೀಡಬೇಕು. ಕೊಡಗಿನ ರೈತರ ತಾಳ್ಮೆಯನ್ನು ಪರೀಕ್ಷಿಸಲು ಜಿಲ್ಲಾಡಳಿತ ಮುಂದಾಗಬಾರದು ಎಂದು ಆಗ್ರಹಿಸಿರುವ ಟಾಟು ಮೊಣ್ಣಪ್ಪ ಅವರು, ತಪ್ಪಿದ್ದಲ್ಲಿ ಜಿಲ್ಲೆಯ ಜನತೆಯನ್ನು ಸಂಘಟಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
