ಕಲ್ಲಿನ ದೇವಸ್ಥಾನಕ್ಕೆ ಪ್ರಸಿದ್ಧವಾದ ದೇವಾಲಯ ಶಿವಮೊಗ್ಗ ಜಿಲ್ಲೆಯ ನಾಡಕಲಸಿ

29/10/2020

ನಾಡಕಲಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಕಲ್ಲಿನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಸುಮಾರು ೮ ಕಿಲೋಮೀಟರ್ ದೂರದಲ್ಲಿ ಕಲಸಿ ಗ್ರಾಮವಿದೆ. ಸಾಗರದಿಂದ ಸೊರಬಕ್ಕೆ ಹೋಗುವ ಮಾರ್ಗದಲ್ಲಿ ಐದಾರು ಕಿಲೋಮೀಟರ್ ದೂರ ಹೊಗುತ್ತಿದ್ದಂತೆ ಬಲಗಡೆ ನಾಡ ಕಲಸಿಯ ಫಲಕದ ನಂತರ ಕಲಸಿ (ಬ್ರಾಹ್ಮಣ ಕಲಸಿ) ನಾಮ ಫಲಕ ಕಾಣುವುದು. ಆ ಟಾರು ರಸ್ತೆ ಯಲ್ಲಿ ಸುಮಾರು ಎರಡು ಕಿ.ಮೀ.ದೂರ ಹೋದರೆ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ಎಂಬ ಅವಳಿ ದೇವಾಲಯಗಳು ಕಾಣುವುದು. ಆ ದೇವಾಲಯಗಳು ಮುಜರಾಯಿ ಮತ್ತು ಪುರಾತತ್ವ ಇಲಾಖೆಗೆ ಸೇರಿದೆ.

ಇತಿಹಾಸ
ಈ ದೇವಾಲಯಗಳು ಶಾಲಿವಹನ ಶಕ ವರ್ಷ ೧೧೪೦ನೇ ಬಹುಧಾನ್ಯ ಸಂವತ್ಸರದಲ್ಲಿ (ಕ್ರಿ. ಶ. ೧೨೧೮ ರಲ್ಲಿ) ನಿರ್ಮಾಣವಾಯಿತೆಂದು ಶಿಲಾಶಾಸನಗಳು ಹೇಳುತ್ತವೆ. ಆ ಕಾಲದಲ್ಲಿ ಈ ಪ್ರಾಂತಕ್ಕೆ ಕುಂದನಾಡು, ಕೊಡನಾಡು ಎಂದು ಹೆಸರಿತ್ತು. ಈ ನಾಡನ್ನು ಆಳಿದವನು ಕುಮಾರ ಬಾಳೆಯಮ್ಮ (ಬಾಳೆಯಣ್ಣ?) ಹೆಗ್ಗಡೆ. ಈತನ ತಾಯಿ ಚಿಯಬರಸಿ. ತಂದೆ ಗೊಂಗಣ. ಈ ಬಾಳೆಯಮ್ಮ ಹೆಗ್ಗಡೆ ಹೊಯ್ಸಳ ೨ನೇ ಬಲ್ಲಾಳನ ಸಾಮಂತ ರಾಜನಾಗಿ ನಾಡಕಲಸಿಯನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡು ಆಳಿದ. ಕುಮಾರ ಬಾಳೆಯಮ್ಮ ಹೆಗ್ಗಡೆಗೆ, ಕದನ ಪ್ರಚಂಡ, ಏಕಾಂಗ ವೀರ, ಗಂಡುಗಳ್ತರಿಬಾಳೆಗ, ಶರಣಾಗತ ರಕ್ಷಕ ಎಂಬ ಬಿರುದುಗಳಿದ್ದವು. ಶಿಲಾಶಾಸನಗಳಲ್ಲಿ ಈಗಿನಂತೆ ಕಲಸಿ ಎಂದಿರದೆ ಕಲಿಸೆ ಎಂದಿರುವುದು ಕಂಡುಬರುತ್ತದೆ.

ಬಾಳೆಯಮ್ಮ ಹೆಗ್ಗಡೆನಂತರ ಈ ಕುಂದನಾಡನ್ನು ಬೀರದೇವರಸನು ಕ್ರಿ.ಶ. ೧೨೪೮ರಿಂದ ಕ್ರಿ.ಶ. ೧೨೭೮ರ ವರೆಗೆ ಕಲಿಸೆಯಲ್ಲಿ ಆಳಿದನು. ತದನಂತರ ಅವನ ಮಗ ಬೀರದೇವರಸನು ಕಲಿಸೆಯನ್ನು ಬಿಟ್ಟು ಹೊಸಗುಂದಕ್ಕೆ ರಾಜಧಾನಿಯನ್ನು ಬದಲಾಯಿಸಿ ಅಲ್ಲಿ ಇರತೋಡಗಿದನು. ಹೊಸಗುಂದದಲ್ಲಿಯೂ ಹೊಯ್ಸಳ ಮಾದರಿಯ ದೇವಾಲಯವನ್ನು ಕಾಣಬಹುದು. ಕಲಸಿಯ ಕಾಡಿನಲ್ಲಿ ರಾಜಧಾನಿಯ ಕುರುಹಾಗಿ ಹಾಳು ಭಾವಿಗಳು, ಕಲ್ಲುಹಾಸಿನ ಚರಂಡಿಗಳನ್ನು ಕಾಣಬಹುದು.

ಕಲಸಿಯು ವಿಜಯನಗರದ ಅರಸರ ಕಾಲದಲ್ಲಿ ಅವರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯನಗರದ ಅರಸರು, ಕೆಳದಿ ಅರಸನು, ಮನ್ನೆಯ ಚೌಡಪ್ಪ ನಾಯಕನಿಗೆ, ಕೊಟ್ಟ ಎಂಟು ಮಾಗಣಿಯಲ್ಲಿ ಕಲಸಿಯೂ ಒಂದು.

ದೇವಾಲಯ ಮತ್ತು ವಾಸ್ತು ಶಿಲ್ಪ
ಕಲ್ಲಿನಿಂದ ನಿರ್ಮಾಣವಾಗಿರುವ ಈ ಅವಳಿ ದೇವಾಲಯಗಳು ಸುಂದರವೂ ಮೋಹಕವೂ ಆಗಿದೆ. ಸುಮಾರು ೭೫೦ವರ್ಷಗಳಷ್ಟು ಪ್ರಾಚೀನವಾದ ಈ ದೇವಾಲಯಗಳಲ್ಲಿ ಚಿಕ್ಕದಾದ ಒಂದು ದೇವಾಲಯ ಶಿಥಿಲಾವಸ್ಥೆಯಲ್ಲಿದೆ. ದೇವಾಲಯದ ಪ್ರಾಂಗಣದ ಒಳಗೇ ಒಂದು ಶಿಲಾಶಾಸನವಿದೆ. ಶಿಲಾಶಾಸನದ ಪ್ರಕಾರ, ಚಿಕ್ಕದು ಸೋಮೇಶ್ವರ ದೇವಾಲಯ. ಆದರೆ ಅದನ್ನು ಈಗ ನೀಲಕಂಠೇಶ್ವರ ದೇವಾಲಯವೆಂದು ಕರೆಯುತ್ತಾರೆ. ದೊಡ್ಡದು ಮಲ್ಲಿಕಾರ್ಜುನ ದೇವಾಲಯ. ಈ ಎರಡೂ ದೇವಾಲಯಗಳು ಹೊಯ್ಸಳ ಶಿಲ್ಪರಚನಾ ಶೈಲಿಯವು. ತಳಪಾಯ ಮತ್ತು ಮೇಲ್ಛಾವಣಿಗಳು ನಕ್ಷತ್ರಾಕಾರವಾಗಿವೆ, ಇವುಗಳನ್ನು ತಂದೆ ಮಕ್ಕಳ ಗುಡಿಯೆಂದು (ಕೆಳಗೆ ದಂತ ಕಥೆ ನೋಡಿ) ಕರೆಯುತ್ತಾರೆ. ಇತರೆ ಚಿತ್ರಗಳನ್ನು ನೋಡಲು ದೇವಾಲಯದ ಚಿತ್ರದ ಮೇಲೆ ಕ್ಲಿಕ್ ಮಾಡಿ.

ದೊಡ್ಡದಾದ ಮಲ್ಲಿಕಾರ್ಜುನ ದೇವಾಲಯ ೮೨ ಅಡಿ ಉದ್ದ ೪೬.೫ ಅಡಿ ಅಗಲವಿದೆ. ಗರ್ಭಗುಡಿ, ಸುಖನಾಸಿ, ರಂಗಮಂಟಪ, ನಂದಿಮಂಟಪಗಳು ಹೊಯ್ಸಳ ಮಾದರಿಯಲ್ಲಿದ್ದು ಉತ್ತರಾಭಿಮುಖವಾಗಿದೆ. ಮೂರು ದಿಕ್ಕಿಗೆ ಮೂರು ದ್ವಾರಗಳಿವೆ. ಸುಖನಾಸಿಯ ಮುಂಗೋಡೆಯಲ್ಲಿ ನೃತ್ಯಗಾತಿಯರ, ಹಿನ್ನೆಲೆವಾದಕರ ವಿವಿಧ ಭಂಗಿಯ ಕೆತ್ತನೆಯ ಶಿಲ್ಪಗಳ ಜಾಲಂದ್ರ, ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮಿ , ದ್ವಾರದ ಅಕ್ಕ ಪಕ್ಕದಲ್ಲಿ ವಿನಾಯಕ, ಮಹಿಷಾಸುರಮರ್ದಿನಿ, ಸಪ್ತ ಮಾತೃಕೆಯರು ಉಮಾಮಹೇಶ್ವರ ಮೂರ್ತಿಗಳನ್ನು ಕಾಣಬಹುದು. ಈ ದೇವಾಲಯದ ಸುತ್ತಲೂ, ಕಲ್ಲಿನ ಅರೆಗೋಡೆ ಇದ್ದು, ಇದು ಒಳ ಭಾಗದಲ್ಲಿ ತಳದಿಂದ ೫.೫ ಅಡಿ ಎತ್ತರ ಇದ್ದು ಸುತ್ತ ಕಲ್ಲಿನ ಹಾಸು ಇದೆ. ಗೋಡೆಯ ಹೊರಗೆ ಕಟಾಂಜನದ ಮೇಲು ಭಾಗದಲ್ಲಿ ಬಳ್ಳಿಗಳ ಸಾಲು, ಅದರ ಕೆಳಗೆ ಗೋಪುರ ಚಿತ್ರ, ಇನ್ನೂ ತಳಕ್ಕೆ ಸಿಂಹ ಮತ್ತು ಆನೆಗಳ ಸಾಲುಗಳಿವೆ.

ಚಿಕ್ಕ ದೇವಾಲಯ ೪೪ಅಡಿ ಉದ್ದ, ೨೫ಅಡಿ ಅಗಲವಿದೆ. ರಂಗಮಂಟಪ ನಾಲ್ಕು ಕಂಬಗಳಿಮದ ಕೂಡಿದೆ. ದೇವಾಲಯದ ಅರೆಗೋಡೆಯ ಹೊರ ಭಾಗದಲ್ಲಿ ಕಾಮಸೂತ್ರಕ್ಕೆ ಸಂಬಂಧಿಸಿದ ಮಿಥುನ ಚಿತ್ರಗಳಿವೆ.

ಈ ದೇಗುಲದ ವಿಶೇಷವೆಂದರೆ ಮೇಲ್ಭಾಗದಲ್ಲಿ ಚಾಲುಕ್ಯ ಶೈಲಿಯ ಹದಿನೈದು ಅಡಿ ಎತ್ತರದ ಗೋಪುರವಿದೆ. ಅದರ ಮಧ್ಯ ಭಾಗದಲ್ಲಿ ಪ್ರತ್ಯೇಕವಾಗಿ ಕೆತ್ತಿಮಾಡಿದ ಸಳ ಲಾಂಛನವಿದೆ. ಅದರ ಕೆಳಗಡೆ ಸುಂದರವಾದ ನಟರಾಜನ ವಿಗ್ರಹ ಮನ ಸೆಳೆಯುವಂತಿದೆ. ಹೊಯ್ಸಳ ಲಾಂಛನವು ಈ ದೇವಾಲಯದಲ್ಲಿರುವುದು ಒಂದು ವಿಶೇಷ. (ಇತರೆ ಚಿತ್ರಗಳನ್ನು ನೋಡಲು ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ)