ವಿರಾಜಪೇಟೆ ತಾಲ್ಲೂಕು ಕಚೇರಿಗೆ ಶಾಸಕ ಬೋಪಯ್ಯ ಭೇಟಿ : ಅಧಿಕಾರಿಗಳ ವಿರುದ್ಧ ಅಸಮಾಧಾನ

29/10/2020

ಮಡಿಕೇರಿ ಅ.29 : ಪೌತಿ ಖಾತೆಗೆ ಸಂಬಂಧಿಸಿದಂತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಸಮಸ್ಯೆಗಳಿದ್ದು, ಅಧಿಕಾರಿಗಳು ಅರ್ಜಿದಾರರಿಗೆ ಸೂಕ್ತ ಸ್ಪಂದನೆ ನೀಡುವ ಮೂಲಕ ಕಡತ ವಿಲೇವಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಸೂಚನೆ ನೀಡಿದ್ದಾರೆ.
ವಿರಾಜಪೇಟೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳು ಹಾಗೂ ಅರ್ಜಿದಾರರೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಂದಾಯ ಜಮೀನುಗಳ ಪೌತಿ ಖಾತೆ ಆಂದೋಲನವನ್ನು ಸರ್ಕಾರ ಆರಂಭಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಡಿಸೆಂಬರ್ ಅಂತ್ಯದೊಳಗೆ ಪೌತಿ ಖಾತೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಪೌತಿ ಖಾತೆಯ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿದಾಗ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಅ.17ರಂದು ಸುತ್ತೋಲೆ ಹೊರಡಿಸಿ ಖಾತೆ ಮಾಡುವ ಆಂದೋಲನಕ್ಕೆ ಹಸಿರು ನಿಶಾನೆ ತೋರಿದ್ದಾರೆ ಎಂದರು.
::: ತರಾಟೆಗೆ ಒಳಗಾದ ತಹಶೀಲ್ದಾರ್ :::
ವಿರಾಜಪೇಟೆ ತಹಶೀಲ್ದಾರರು ಜನರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಮತ್ತು ಕಡತ ವಿಲೇವಾರಿ ಮಾಡುತ್ತಿಲ್ಲವೆಂದು ಸ್ಥಳದಲ್ಲಿದ್ದ ಅರ್ಜಿದಾರರು ಆರೋಪಿಸಿದರು. ಇದರಿಂದ ಅಸಮಾಧಾನಗೊಂಡ ಶಾಸಕ ಬೋಪಯ್ಯ ಅವರು ತಹಶೀಲ್ದಾರ್ ಸಂಜು ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಜನಪರವಾಗಿ ನೀತಿ, ನಿಯಮಗಳನ್ನು ರೂಪಿಸಿ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಅದೇ ರೀತಿಯಲ್ಲಿ ಅಧಿಕಾರಿಗಳು ಕೂಡ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಮತ್ತು ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಅರ್ಜಿದಾರರಿಗೆ ತಿಳಿ ಹೇಳಬೇಕೆಂದು ಸಲಹೆ ನೀಡಿದರು.
ಸಾರ್ವಜನಿಕರನ್ನು ನಿರ್ಲಕ್ಷಿಸಬಾರದೆಂದು ತಿಳಿಸಿದ ಶಾಸಕರು, ತಾಲ್ಲೂಕು ಕಚೇರಿಗೆ ಪ್ರತಿವಾರ ಭೇಟಿ ನೀಡುವುದಾಗಿ ತಿಳಿಸಿದರು. ಅ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಖುದ್ದಾಗಿ ತಾವೇ ಅಧಿಕಾರಿಗಳಿಗೆ ಓದಿ ಹೇಳಿದರು. ತಾಲ್ಲೂಕು ಕಚೇರಿಯಲ್ಲಿ ತಮಗಾಗುತ್ತಿರುವ ತೊಂದರೆಗಳನ್ನು ಸಾರ್ವಜನಿಕರು ಹಾಗೂ ಬಿಜೆಪಿ ಪ್ರಮುಖರು ಶಾಸಕರ ಮುಂದೆ ವಿವರಿಸಿದರು.