ಹೊದವಾಡದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

October 30, 2020

ಮಡಿಕೇರಿ ಅ. 30 : ನಾಪೋಕ್ಲು ಸಮೀಪದ ಹೊದವಾಡ ರಾಫಲ್ಸ್ ಇಂಟರ್ನ್ಯಾಷನಲ್ ಪಿ.ಯು. ಕಾಲೇಜಿನಲ್ಲಿ ಕೊಡಗು ಜಿಲ್ಲೆಯ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ 22 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದುಬೈ ಕೊಡಗು ಹಳೇ ವಿದ್ಯಾರ್ಥಿ ಸಂಘ ಯು.ಎ.ಇ. ಇವರ ವತಿಯಿಂದ ಒಂದು ಲಕ್ಷ ರೂಪಾಯಿ
ಮೊತ್ತದ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ವಕೀಲರಾದ ಅಚ್ಚನ್ಡೀರ ಪವನ್ ಪೆಮ್ಮಯ್ಯ ಮಾತನಾಡಿ ಇಂದಿನ ಈ ಕೊರೋನಾ ಮಹಾಮಾರಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇಂತಹ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ಧನವನ್ನು ನೀಡುತ್ತಿರುವ ದುಬೈ ಕೊಡಗು ಹಳೇ ವಿದ್ಯಾರ್ಥಿ ಸಂಘದ ರಫೀಕಲಿ ಕುಂಡಂಡ ಕುಂಜಿಲ, ಶಾಫಿ ಅಜಾದ್ ಕೊಟ್ಟಮುಡಿ, ಅಬ್ದುಲ್ಲಾ ಕೊಂಡಂಗೇರಿ, ನೌಶೀರ್ ಎಡಪಲ, ಹುಸೈನ್ ಸೋಮರಪೇಟೆ ಮುಂತಾದ ಪದಾಧಿಕಾರಿಗಳ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಇನ್ನು ಮುಂದೆ ಕೂಡ ಇಂತಹ ಸಾಧನೆಗಳ ಮುಲಕ ತಮ್ಮ ಪೋಷಕರು ಹೆಮ್ಮೆ ಪಡುವಂತೆ ಮಾಡಬೇಕು ಎಂದು ಹುರಿದುಂಬಿಸಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಿ ಮಾತನಾಡಿದ ಅತಿಥಿಗಳಾದ ಶಂಸುಲ್ ಉಲಮಾ ಹೆಣ್ಣು ಮಕ್ಕಳ ಅನಾಥಾಲಯ ವಿರಾಜಪೇಟೆ ಇದರ ಅಧ್ಯಕ್ಶರಾದ ಬಷೀರ್ ಹಾಜಿರವರು ಮಾತನಾಡಿ ಶಿಕ್ಷಣವು ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಹಾಗೂ ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವಂತಿರಬೇಕು ಎಂದರು. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನೆರವಾಗುತ್ತಿರುವಂತಹ ಹಳೇ ವಿದ್ಯಾರ್ಥಿ ಸಂಘದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಸೇವೆಯನ್ನು ಇನ್ನೂ ಕೂಡ ಮುಂದುವರಿಸಲು ವಿನಂತಿಸಿದರು.
ರಾಫಲ್ಸ್ ಇಂಟರ್ನ್ಯಾಷನಲ್ ವಿದ್ಯಾ ಸಂಸ್ಥೆಯ ಉಪ ಪ್ರಾಂಶುಪಾಲರಾದ ತನ್ವೀರ್ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಯ ನಂತರ ಮುಂದೇನು ಎಂಬ ವಿಷಯದ ಕುರಿತಾಗಿ ವೃತ್ತಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ
ಮಾತನಾಡಿದ ಮೆಹಬೂಬ್ ಸಾಬ್ ರವರು ಶಿಕ್ಷಣದ ಮಹತ್ವ ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಗಳ ಕುರಿತಾಗಿ ಮಾತನಾಡಿ ಇಂತಹ ಪ್ರೋತ್ಸಾಹ ಗಳ ಮೂಲಕ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಾಧನೆ ಮಾಡುವಂತಾಗಬೇಕು ಎಂದರು.
ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಯಾನಾ ಸೋಮಯ್ಯ, ಮರ್ಕಜ್ ಸಂಸ್ಥೆಯ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಕೊಡವ ಮುಸ್ಲಿಂ ಶಿಕ್ಷಣ ನಿಧಿ ಮುಖ್ಯಸ್ಥರಾದ ಹಂಸ ಕೊಟ್ಟಮುಡಿ, ಸೂಫಿ ಕುಂಡಂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಾಫಲ್ಸ್ ಇಂಟರ್ನ್ಯಾಷನಲ್ ಪಿ.ಯು. ಕಾಲೇಜಿನ ಉಪನ್ಯಾಸಕಿ ರೇಖಾ ಕಿಶೋರ್ ಸ್ವಾಗತಿಸಿ, ಅದಿತಿ ನಿರೂಪಿಸಿ, ವಾಣಿಜ್ಯ ವಿಭಾಗದ ಪೂಜಶ್ರೀ ವಂದಿಸಿದರು.

error: Content is protected !!