ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ದಿವಾಳಿ ವಿವಾದ : ಬ್ಯಾಂಕ್ ಸಹಜ ಸ್ಥಿತಿಗೆ ಮರಳಿ ಸೇವೆ ಒದಗಿಸುವಂತಾಗಬೇಕು: ಕೆ.ಎಂ.ಎ. ನಿಲುವು

30/10/2020

ಪೊನ್ನಂಪೇಟೆ, ಅ.30: ವಿರಾಜಪೇಟೆಯಲ್ಲಿರುವ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತ ಇದೀಗ ಕಳೆದ ಕೆಲ ದಿನಗಳಿಂದ ಮುಚ್ಚಲ್ಪಟ್ಟಿದ್ದು, ಸಂಘದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ತೀವ್ರ ಆತಂಕ ಮೂಡಿಸಿದೆ. ಬ್ಯಾಂಕ್ ದಿವಾಳಿತನದಿಂದ ಠೇವಣಿದಾರರು ಮತ್ತು ಗ್ರಾಹಕರು ಗೊಂದಲದಲ್ಲಿದ್ದಾರೆ ಎಂದು ಹೇಳಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.), ಕಷ್ಟಪಟ್ಟು ದುಡಿದ ಬೆವರಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿರಿಸಿರುವ ಠೇವಣಿದಾರರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಜೊತೆಗೆ ಬ್ಯಾಂಕಿನಿಂದ ಸಾಲ ಪಡೆದ ಸಾಲಗಾರರ ಹಣ ವಸೂಲಾತಿಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು, ಸಮುದಾಯದ ಆರ್ಥಿಕ ಸಬಲೀಕರಣದ ಕುರಿತು ದೂರದೃಷ್ಟಿತ್ವ ಹೊಂದಿದ್ದ ಅಂದಿನ ಕೆಲ ಸಹಕಾರಿ ಧುರೀಣರಿಂದ ವಿರಾಜಪೇಟೆಯಲ್ಲಿ ಆರಂಭಗೊಂಡ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘಕ್ಕೆ 80ಕ್ಕೂ ಹೆಚ್ಚು ವರ್ಷದ ಇತಿಹಾಸವಿದೆ. ವಿರಾಜಪೇಟೆಯ ಹೃದಯಭಾಗದಲ್ಲಿ ವಾಣಿಜ್ಯ ಸಂಕೀರ್ಣ ಸೇರಿದಂತೆ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಸಹಕಾರಿ ಸಂಘ, ಗೋಣಿಕೊಪ್ಪಲಿನಲ್ಲಿ ಉತ್ತಮವಾದ ಶಾಖೆಯೊಂದನ್ನು ಹೊಂದಿತ್ತು. ಹಿಂದಿನಿಂದಲೂ ಆರ್ಥಿಕವಾಗಿ ಹಿಂದುಳಿದ ಗ್ರಾಹಕರಿಗೆ ಮತ್ತು ಸದಸ್ಯರಿಗೆ ಬೆನ್ನೆಲುಬಾಗಿ ಉತ್ತಮ ರೀತಿಯ ವ್ಯವಹಾರ ಮಾಡಿಕೊಂಡಿದ್ದ ಈ ಸಹಕಾರ ಸಂಘ ಇದೀಗ ದಿವಾಳಿಯ ಅಂಚಿಗೆ ತಲುಪಿರುವುದು ಖೇದಕರ ಸಂಗತಿಯಾಗಿದೆ. ಆದ್ದರಿಂದ ಗ್ರಾಹಕರು ಮತ್ತು ಸದಸ್ಯರು ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಈ ಸಹಕಾರ ಸಂಘವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಇದನ್ನು ಹಿಂದಿನ ಸಹಜ ಸ್ಥಿತಿಗೆ ಮರಳಿ ತಂದು ಇದರ ಸೇವೆ ಪಡೆಯಲು ಎಲ್ಲರೂ ಕೈಜೋಡಿಸಬೇಕಿದೆ ಎಂಬುದು ಸಂಘಟನೆಯ ನಿಲುವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಹಕಾರ ಸಂಘ ಕಳೆದ 10 ವರ್ಷಗಳಿಂದಲೇ ಹಳಿತಪ್ಪಿದೆ ಎಂಬುದು ಇದೀಗ ತಿಳಿದು ಬರುತ್ತಿರುವ ಸಂಗತಿಯಾಗಿದೆ. ಆದರೂ ಕಳೆದ 2019-20 ನೇ ಸಾಲಿನ ಮಹಾಸಭೆಯವರೆಗೂ ಈ ಸಹಕಾರ ಸಂಘ ನಿವ್ವಳ ಲಾಭಗಳಿಸಿದೆ ಎಂಬ ಲೆಕ್ಕ ಪತ್ರ ನೀಡಿರುವುದು ಸಂಪೂರ್ಣವಾಗಿ ಸುಳ್ಳಾಗಿರುತ್ತದೆ. ಇದು ಬ್ಯಾಂಕಿನ ಸದಸ್ಯರಿಗೆ ಮಾಡಿದ ಮೋಸ ಎಂದು ಆರೋಪಿಸಿದ ಸೂಫಿ ಹಾಜಿ ಅವರು, ಬ್ಯಾಂಕಿನ ಹೆಸರನ್ನು ಲೆಕ್ಕಿಸದೆ ವಿಶ್ವಾಸಪೂರ್ವಕವಾಗಿ ಲಕ್ಷಾಂತರ ಮೊತ್ತದ ಠೇವಣಿಯಿರಿಸಿದ್ದ ನೂರಾರು ವಿವಿಧ ವರ್ಗದ ಠೇವಣಿದಾರರು ಈ ಮೋಸದಿಂದ ಇದೀಗ ಕಂಗೆಟ್ಟಿದ್ದು, ತೀವ್ರ ತೊಂದರೆಯಲ್ಲಿ ಸಿಲುಕಿದ್ದಾರೆ. ಈ ರೀತಿಯ ಅನ್ಯಾಯ ಯಾರಿಗೂ ಶೋಭೆ ತರುವ ವಿಷಯವಲ್ಲ. ಈ ಸಹಕಾರ ಸಂಘ ಇಂದು ಗ್ರಾಹಕರ ವಿಶ್ವಾಸ ಕಳೆದುಕೊಂಡಿದ್ದು, ಠೇವಣಿದಾರರು ಕಾನೂನು ಹೋರಾಟಕ್ಕೆ ಮುಂದಾಗುವ ಮೊದಲೇ ಅವರ ಹಣವನ್ನು ಹಿಂದಿರುಗಿಸಿ ಕನಿಷ್ಠ ವಿಶ್ವಾಸವಾದರೂ ಉಳಿಸಿಕೊಳ್ಳಬೇಕು. ಇದಕ್ಕೆ ಇನ್ನೂ ಕಾಲ ಮಿಂಚಿಲ್ಲ ಎಂದು ಅವರು ಹೇಳಿದ್ದಾರೆ.

ಮೂಲವೊಂದರ ಮಾಹಿತಿಯಂತೆ ಈ ಸಹಕಾರಿ ಸಂಘ ರೂ. 9.11 ಕೋಟಿ ಹಣವನ್ನು ವಿವಿಧ ಬಾಪ್ತುಗಳಲ್ಲಿ ಪಾವತಿಸಲು ಬಾಕಿ ಇದೆ. ರೂ 3 ಕೋಟಿ ಹಣ ಸಾಲಗಾರರಿಂದ ಸಂಘಕ್ಕೆ ಪಾವತಿಯಾಗಲು ಬಾಕಿ ಇದೆ. ಸಂಘದ ಸಾಲಗಾರರು ಬಾಕಿಯಿರಿಸಿಕೊಂಡಿರುವ ಹಣ ವಸೂಲಾತಿಗೆ ಇದುವರೆಗೂ ಈ ಸಹಕಾರಿ ಸಂಘ ಗಂಭೀರವಾಗಿ ಪ್ರಯತ್ನಿಸಿಲ್ಲ ಏಕೆ? ಎಂದು ಖಾರವಾಗಿ ಪ್ರಶ್ನಿಸಿರುವ ಡಿ.ಹೆಚ್. ಸೂಫಿ ಅವರು, ಸಹಕಾರ ಬ್ಯಾಂಕಿನಿಂದ ಪಡೆದ ಸಾಲವನ್ನು ಒಂದಲ್ಲ ಒಂದು ದಿನ ಪಾವತಿಸಲೇಬೇಕು. ಆದ್ದರಿಂದ ಸಾಲ ವಸೂಲಾತಿಗೆ ಸಂಘ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ವಾಯಿದೆ ಮೀರಿದ ಸಾಲಕ್ಕೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಬೇಕು. ಹೀಗಾದಲ್ಲಿ ಮಾತ್ರ ವಸೂಲಾತಿ ಸಾಧ್ಯ. ಬ್ಯಾಂಕಿಗೆ ಬರಲು ಬಾಕಿ ಇರುವ ಹಣ ಪಾವತಿಯಾದರೆ ಠೇವಣಿದಾರರಿಗೆ ಅವರ ಹಣ ಹಿಂತಿರುಗಿಸಲು ಅನುಕೂಲವಾಗುತ್ತದೆ. ಈ ಸಾಮಾನ್ಯ ಜ್ಞಾನ ಈ ಸಂಘದ ಆಡಳಿತ ಮಂಡಳಿಯವರಿಗೆ ಇಲ್ಲವೇ? ಎಂದು ಕಿಡಿಕಾರಿದ್ದಾರೆ.

ಈ ಸಹಕಾರ ಸಂಘದ ಇಂದಿನ ಸ್ಥಿತಿಗೆ ಅದರ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳೇ (ಕಾರ್ಯದರ್ಶಿ) ನೇರ ಹೊಣೆಗಾರರಾಗಿದ್ದಾರೆ. ಇದುವರೆಗೂ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಕತ್ತಲೆಯಲ್ಲಿಟ್ಟು ಸುಳ್ಳು ಲೆಕ್ಕ ಪತ್ರ ನೀಡಿ ಸದಸ್ಯರನ್ನು ಮತ್ತು ಗ್ರಾಹಕರನ್ನು ವಂಚಿಸಿದಂತೆ ಇವರಿಗೂ ಮೋಸ ಮಾಡಲಾಗಿದೆ. ಈ ಸಹಕಾರ ಸಂಘದ ಪ್ರತಿ ಸಾಮಾನ್ಯ ಸಭೆಯಲ್ಲಿ ನಕಲಿ ಲೆಕ್ಕಪತ್ರವನ್ನು ಪದಾಧಿಕಾರಿಗಳಿಗೆ ನೀಡಲಾಗಿದೆ. ಮಹಾಸಭೆಯಲ್ಲಿಯೂ ನಷ್ಟದ ವಿವರವನ್ನು ನೀಡದೆ ನಕಲಿ ಲೆಕ್ಕಪತ್ರ ನೀಡಿರುವುದು ಅಪರಾಧವಾಗಿರುತ್ತದೆ. ಈ ಮೋಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಂಘದ ಆಡಿಟರ್ ಇವರೊಂದಿಗೆ ಶಾಮೀಲಾಗಿರುವ ಶಂಕೆ ಇದೆ ಎಂದು ಆಪಾದಿಸಿರುವ ಸೂಫಿ ಹಾಜಿ ಅವರು, ಉತ್ತಮವಾಗಿ ನಡೆಯುತ್ತಿದ್ದ ಗೋಣಿಕೊಪ್ಪಲು ಶಾಖೆಯಿಂದ ರೂ.1.5 ಕೋಟಿ ಹಣವನ್ನು ವಿರಾಜಪೇಟೆಗೆ ವರ್ಗಾವಣೆ ಮಾಡಿರುವ ಮಾಹಿತಿ ಇದೆ. ಇದು ನಿಜವಾಗಿದ್ದಲ್ಲಿ ಇದೊಂದು ಕಾನೂನುಬಾಹಿರ ಕ್ರಮ ಎಂದು ಅವರು ದೂರಿದ್ದಾರೆ.

ಬ್ಯಾಂಕಿನಲ್ಲಿ ಕೋಟ್ಯಂತರ ಹಣ ದುರುಪಯೋಗವಾಗಿದೆ ಎಂಬ ವಿಷಯ ಇತ್ತೀಚಿಗೆ ಬಹಿರಂಗಗೊಳ್ಳುತ್ತಿದ್ದಂತೆ ಕಳೆದ 3 ತಿಂಗಳ ಹಿಂದೆಯೇ ಬ್ಯಾಂಕಿನ ಕೆಲ ನಿರ್ದೇಶಕರು ಮಡಿಕೇರಿಯಲ್ಲಿರುವ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಇವರು ಕೇವಲ ವಿಚಾರಣಾಧಿಕಾರಿಯೊಬ್ಬರನ್ನು ನೇಮಿಸಿ ಕೈತೊಳೆದುಕೊಂಡಿದ್ದಾರೆ. ಆದ್ದರಿಂದ ಇವರ ನಡೆಯ ಬಗ್ಗೆಯೂ ಜನ ವಲಯದಲ್ಲಿ ಸಂಶಯ ಮೂಡುತ್ತಿದ್ದು, ಕೂಡಲೇ ಸಾರ್ವಜನಿಕರಿಗೆ ಈ ಕುರಿತ ನೈಜಾಂಶವನ್ನು ಬಹಿರಂಗಪಡಿಸುವ ಹೊಣೆಗಾರಿಕೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಇದೆ. ಈ ಜವಾಬ್ದಾರಿಯನ್ನು ಅವರು ನೆರವೇರಿಸಿ ಅವರು ತಮ್ಮ ಹುದ್ದೆಯ ಗೌರವ ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿರುವ ದುದ್ದಿಯಂಡ ಸೂಫಿ ಹಾಜಿ ಅವರು, ಸಾವಿರಾರು ಸದಸ್ಯರ ಷೇರು ಬಂಡವಾಳ ಇರುವುದರಿಂದ ಇದರ ಆಗುಹೋಗುಗಳ ಕುರಿತು ಸದಸ್ಯರಿಗೆ ಸಂಘ ಉತ್ತರದಾಯಿತ್ವವಾಗಿದ್ದು, ಬ್ಯಾಂಕಿನಲ್ಲಿ ಹಣ ದುರುಪಯೋಗವಾಗಿರುವ ಮೂಲ ತಿಳಿಯಲು ಸದಸ್ಯರು ಹಕ್ಕುದಾರರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ತ ತನಿಖೆಗೆ ಒತ್ತಾಯ:
ವಿರಾಜಪೇಟೆಯ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತದ ಎಲ್ಲಾ ವ್ಯವಹಾರಗಳನ್ನು ಕೂಡಲೇ ಸಮಗ್ರವಾದ ತನಿಖೆಗೆ ಒಳಪಡಿಸಬೇಕು. ಹಣ ದುರುಪಯೋಗವಾದ ಪ್ರಮುಖ ಮೂಲವನ್ನು ಸೂಕ್ತ ತನಿಖೆಯ ಮೂಲಕ ಪತ್ತೆ ಹಚ್ಚಬೇಕು. ಅದಕ್ಕಾಗಿ ಮೊದಲು ಲೆಕ್ಕಪತ್ರವನ್ನು ಸಮಗ್ರವಾಗಿ ಸರಕಾರಿ ಆಡಿಟ್ ಗೆ ಒಳಪಡಿಸಬೇಕು. ಅಧಿಕ ಬಡ್ಡಿಯ ಆಮಿಷವೊಡ್ಡಿ ಠೇವಣಿ ತರಿಸಿರುವ ಬಗ್ಗೆಯೂ ತನಿಖೆಯಾಗಬೇಕು. ಸಂಘದ ಲೆಕ್ಕಪತ್ರ ನಿರ್ವಹಿಸುವಲ್ಲಿ ಲೋಪವೆಸಗಿದ ಸಂಘದ ಆಡಿಟರ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ತನಿಖೆಯಿಂದ ಸ್ಪಷ್ಟವಾಗುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ದುರುಪಯೋಗವಾಗಿರುವ ಹಣವನ್ನು ಅವರಿಂದಲೇ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಇದು ಸಾಧ್ಯವಾಗದಿದ್ದಲ್ಲಿ ಸಹಕಾರ ಸಂಘಗಳ ಕಾಯ್ದೆಯಂತೆ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅಂತಿಮವಾಗಿ ಠೇವಣಿದಾರರಿಗೆ ಗ್ರಾಹಕರಿಗೆ ಮತ್ತು ಸದಸ್ಯರಿಗೆ ನ್ಯಾಯ ದೊರೆಯಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.)ಪರವಾಗಿ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.

ಗೋಷ್ಠಿಯಲ್ಲಿ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷರಾದ ಆಲೀರ ಎ. ಅಹಮದ್ ಹಾಜಿ, ನಿರ್ದೇಶಕರಾದ ಚಿಮ್ಮಿಚೀರ ಕೆ.ಇಬ್ರಾಹಿಂ(ಉಮಣಿ), ಮೀತಲತಂಡ ಎಂ. ಇಸ್ಮಾಯಿಲ್, ಸಹ ಕಾರ್ಯದರ್ಶಿ ಮಂಡೇಡ ಎ.ಮೊಯಿದು ಅವರು ಉಪಸ್ಥಿತರಿದ್ದರು.