ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

30/10/2020

ಮಡಿಕೇರಿ ಅ. 30 : ದಕ್ಷಿಣ ಕೊಡಗಿನ ಶ್ರೀಮಂಗಲದ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಕಳೆದ ಒಂದು ತಿಂಗಳಿನಿಂದ ಚೊಟ್ಟೆಯಂಡಮಾಡ ಸಂಜು ಅವರ ಗದ್ದೆ, ಉಳುವಂಗಡ ಅಜಿತ ಅವರ ಮನೆ ಪಕ್ಕ, ಚೆಟ್ಟಂಗಡ ಗಪ್ಪು ಪೂವಯ್ಯ ಹಾಗೂ ಬಿಪಿನ್ ಅವರ ತೋಟದಲ್ಲಿ ನಿರಂತರವಾಗಿ ಹುಲಿ ಸಂಚಾರ ಕಂಡು ಬಂದಿದೆ. ಬಲ್ಯಾಂಡಮಾಡ ಧನು ಎಂಬವರ ತೋಟದಲ್ಲಿ ಹುಲಿ ಘರ್ಜನೆಯೂ ಕೇಳಿಸಿದೆ.

ಅಲ್ಲದೇ ಚೊಟ್ಟೆಯಂಡಮಾಡ ವಿಶು ಎಂಬವರ ಕಾಫಿ ಕಣದ ಪಕ್ಕದಲ್ಲೇ ಹುಲಿ ಹಾದು ಹೋಗಿರುವ ಹೆಜ್ಜೆ ಗುರುತುಗಳು ಕಂಡುಬಂದಿದೆ.

ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಗ್ರಾಮಸ್ಥರು ದನಕರುಗಳ ಬಗ್ಗೆ ಎಚ್ಚರವಹಿಸುವಂತೆ ಶ್ರೀಮಂಗಲ ರೈತ ಸಂಘದ ಸಂಚಾಲಕ ಚೆಟ್ಟಂಗಡ ಕಾರ್ಯಪ್ಪ ಮನವಿ ಮಾಡಿದ್ದಾರೆ.