ಪತ್ರಕರ್ತನ ಸೋಗಿನಲ್ಲಿ ಅಶಾಂತಿ ಸೃಷ್ಟಿ : ಕಲ್ಲುಮೊಟ್ಟೆ ಅಂಬೇಡ್ಕರ್ ಯುವಕ ಸಂಘ ಆರೋಪ

30/10/2020

ಮಡಿಕೇರಿ ಅ.30 : ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತನ ಸೋಗಿನಲ್ಲಿರುವ ವ್ಯಕ್ತಿಯೊಬ್ಬ ಕಲ್ಲುಮೊಟ್ಟೆ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದಲ್ಲದೆ ದುರುದ್ದೇಶದಿಂದ ಸ್ಥಳೀಯ ಡಾ.ಅಂಬೇಡ್ಕರ್ ಯುವಕ ಸಂಘದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾನೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆಸೀಫ್ ಆಲಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಸಮೀಪದ ಕಲ್ಲುಮೊಟ್ಟೆಯ ಆದರ್ಶ ನಗರದ ಡಾ.ಅಂಬೇಡ್ಕರ್ ಯುವಕ ಸಂಘ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇದನ್ನು ಸಹಿಸದ ವ್ಯಕ್ತಿಯೊಬ್ಬ ನಾಪೋಕ್ಲು ಠಾಣೆಗೆ ದೂರು ನೀಡಿದ್ದಾನೆ. ಅಲ್ಲದೆ ಸಂಘದ ನಿರ್ದೇಶಕ ಬಶೀರ್ ಆಲಿ ಅವರ ಬಂಧನಕ್ಕೂ ಕಾರಣಕರ್ತನಾಗಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುವ ಕೆಲವರಿಗೆ ತಹಶೀಲ್ದಾರರು ನೋಟಿಸ್ ನೀಡಿದ್ದು, ಇದನ್ನು ವಿರೋಧಿಸಿದ ಬಶೀರ್ ಆಲಿ ಹಾಗೂ ಸದಸ್ಯರ ವಿರುದ್ಧ ದುರುದ್ದೇಶಪೂರಿತವಾಗಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಕಾರಣ ಬಂಧನವಾಗಿದೆ. ಆದ್ದರಿಂದ ತಕ್ಷಣ ಬಶೀರ್ ಆಲಿ ಅವರನ್ನು ಬಿಡುಗಡೆ ಮಾಡÀಬೇಕು ಮತ್ತು ಪತ್ರಕರ್ತನ ಸೋಗಿನ ವ್ಯಕ್ತಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಇನ್ನೆರಡು ದಿನಗಳಲ್ಲಿ ಆತನನ್ನು ಬಂಧಿಸದಿದ್ದಲ್ಲಿ ಯುವಕ ಸಂಘ ಹಾಗೂ ಶ್ರೀಶಕ್ತಿ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸಲಾಗವುದೆಂದು ಆಸೀಫ್ ಎಚ್ಚರಿಕೆ ನೀಡಿದರು.
ಹಲ್ಲೆಗೊಳಗಾದ ಇಸಾಕ್ ಸಹೋದರ ಪಿ.ಎ.ಅಬ್ದುಲ್ ಮಜೀದ್ ಮಾತನಾಡಿ, ಅಶಾಂತಿ ಮೂಡಿಸುತ್ತಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎಂ.ಎಂ.ಸೀನ ಮಾತನಾಡಿ, ಕಳೆದ ಆರು ತಿಂಗಳಿನಿಂದ ಸಾಮಾಜದ ಹಾಗೂ ಊರಿನ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಯುವಕ ಸಂಘ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ವರ್ಧಕ ಕಾಳಜಿಯನ್ನು ತೋರುತ್ತಾ ಬಂದಿದೆ. ಅಲ್ಲದೆ ರಕ್ತದಾನ ಶಿಬಿರಗಳನ್ನು ನಡೆಸಿದೆ. ಇದನ್ನು ಸಹಿಸದ ವ್ಯಕ್ತಿ, ಸಂಘದ ವಿರುದ್ಧ ಠಾಣೆಯಲ್ಲಿ ದೂರು ಸಲ್ಲಿಸಿ ಅಶಾಂತಿ ಮೂಡಿಸುತ್ತಿದ್ದಾನೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ಆರ್.ಸುರೇಶ್ ಉಪಸ್ಥಿತರಿದ್ದರು.